ಮೈಸೂರು: ಪ್ರತಿ ಮಂಗಳವಾರ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯುವ ಮನೋಚೈತನ್ಯ ಲೀಗ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮನೋರೋಗಕ್ಕೆ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾ ಮಾನಸಿಕ ಹಾಗೂ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಬೃಂದಾ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ಮಂಗಳವಾರ, ಶನಿವಾರ ಮಾನಸಿಕ ಆರೋಗ್ಯದ ಸೈಕ್ಯಾಟ್ರಿಸ್ಟ್ ಕೌನ್ಸಿಲರ್, ಸ್ಟಾಫ್ ನರ್ಸ್‌ಗಳನ್ನು ಒಳಗೊಂಡಿರುವ ಟೀಮ್ ಅನ್ನು ಎಲ್ಲ ತಾಲೂಕು ಆಸ್ಪತ್ರೆಗಳು ಒಳಗೊಂಡಿದ್ದು, ಸಾರ್ವಜನಿಕರು ತೆರಳಿ ಕಾಯಿಲೆಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಟೆಲಿ ಮನಸ್ 14416 ಟೋಲ್ ಫ್ರೀ ನಂಬರ್ ನೀಡಲಾಗಿದ್ದು, ಇದನ್ನು ನೇರವಾಗಿ ನಿಮ್ಹಾನ್ಸ್‌ಗೆ ಸಂಪರ್ಕಿಸಲಿದೆ. ಇದರಿಂದ ಮನೆಯಲ್ಲೇ ಕುಳಿತು ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಮಾನಸಿಕ ಆರೋಗ್ಯ ಸಮಸ್ಯೆ ಎಂಬುದು ಮಿದುಳಿಗೆ ಸಂಬಂಧಪಟ್ಟ ಕಾಯಿಲೆ. 14 ವರ್ಷದ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರೌಢಾವಸ್ಥೆ, ಶಾರೀರಕ ಬದಲಾವಣೆ, ಶಾಲೆ ಬದಲಾಯಿಸುವುದು ಅಥವಾ ಉನ್ನತ ವ್ಯಾಸಂಗಕ್ಕೆ ತೆರಳುವುದು ಹೀಗೆ ವಿವಿಧ ಕಾರಣಗಳಿಂದ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಈ ತೊಂದರೆಗೆ ಒಳಗಾಗುತ್ತಾರೆ.
ಜನರಲ್ಲಿ ಜಾಗೃತಿ ಮೂಡಿಸಿ ಅವರಲ್ಲಿರುವ ತಪ್ಪು ಕಲ್ಪನೆಗಳು, ಮೂಢನಂಬಿಕೆ ಹೋಗಲಾಡಿಸಬೇಕಿದೆ. ತೊಂದರೆಗೆ ಒಳಗಾದಂತಹ ವ್ಯಕ್ತಿಗಳಿಗೆ ಆಪ್ತ ಸಮಾಲೋಚನೆ ನೀಡಬೇಕು ಎಂದರು.
ಅತಿಯಾದ ಕೆಲಸದ ಒತ್ತಡ, ಹೊಸ ಕೆಲಸ, ಕೆಲಸ ಮಾಡುವ ಸ್ಥಳದಲ್ಲಿ ಮಾನ್ಯತೆ ಸಿಗದಿರುವುದು ಸಹ ವ್ಯಕ್ತಿ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾನೆ. ಇದರಿಂದ ಸಾಮಾಜಿಕ ಜಾಲತಾಣದ ಬಳಕೆಯ ಚಟಕ್ಕೆ ಬೀಳುತ್ತಾರೆ. ಮಾನಸಿಕ ಖಿನ್ನತೆ, ಆತಂಕದಿಂದ ಆತ್ಮಹತ್ಯೆಗೆ ಗುರಿಯಾಗುತ್ತಾರೆ. ಇದಕ್ಕೆ ಪ್ರಾಥಮಿಕ ಹಂತದಲ್ಲೇ ಕಡಿವಾಣ ಹಾಕಬೇಕು ಎಂದು ಹೇಳಿದರು.
ಪ್ರಪಂಚದಾದ್ಯಂತ ಸುಮಾರು 980 ಮಿಲಿಯನ್ ಜನರು ಮಾನಸಿಕ ಸಮಸ್ಯೆಗೆ ಒಳಗಾಗಿದ್ದು, ಇದರಲ್ಲಿ 8 ಜನರಲ್ಲಿ ಒಬ್ಬರು ಮಾನಸಿಕ ಕಾಯಿಲೆ ಇರುತ್ತದೆ. ಇದರಲ್ಲಿ ಭಾರತ 61ನೇ ಸ್ಥಾನದಲ್ಲಿದ್ದು, ಮಿಲಿಯನ್ ಜನರು ಮಾನಸಿಕ ಕಾಯಿಲೆಯ ವಿವಿಧ ಹಂತಕ್ಕೆ ಒಳಗಾಗಿದ್ದಾರೆ. ಮಾನಸಿಕ ಸಮಸ್ಯೆಗೆ ಸಿಲುಕಿಕೊಂಡ ವ್ಯಕ್ತಿಗಳಿಗೆ ಚಿಕಿತ್ಸೆ, ಅರಿವು ಮೂಡಿಸಲು ಸಮುದಾಯದ ಪಾತ್ರ ಮಹತ್ವದಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಪ್ರಭುಸ್ವಾಮಿ ಮಾತನಾಡಿ, ಪ್ರತಿಯೊಬ್ಬರಿಗೂ ಕೆಲಸದ ಒತ್ತಡ ಇದ್ದೇ ಇರುತ್ತದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಕಾಲಮಾನದಲ್ಲಿ ಜೀವಿತಾವಧಿ, ಜನನ, ಮರಣ ದರಗಳ ಹೋಲಿಕೆ ಮಾಡಿದಲ್ಲಿ ಪ್ರಸ್ತುತ ದಿನಗಳಲ್ಲಿ ಭಾರತವು ಉತ್ತಮ ಸ್ಥಾನದಲ್ಲಿ ಇದೆ. 1941-1947ರ ಅವಧಿಯಲ್ಲಿ ಸರಾಸರಿ ಜೀವಿತಾವಧಿ 32 ವರ್ಷವಿತ್ತು. ಅದೀಗ 70 ವರ್ಷವಾಗಿದೆ. ಇದು ಧನಾತ್ಮಕ ಬೆಳವಣಿಗೆ ಎಂದರು.
ಉತ್ತಮ ಆರೋಗ್ಯಕ್ಕೆ ನಗುವೇ ಔಷಧ, ಇದನ್ನು ಸದಾ ನಮ್ಮ ಮುಖದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ. ಆದ್ದರಿಂದ ಯಾವುದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ. ಕುಮಾರಸ್ವಾಮಿ ಮಾತನಾಡಿ, ಇಲಾಖೆಯ ವತಿಯಿಂದ ವೃದ್ಧರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಸುಮಾರು 628 ವಿವಿಧ ಸಂಸ್ಥೆಗಳಲ್ಲಿ ವಿಶೇಷ ಸೇವೆ ಒದಗಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿಸಲಾಗುತ್ತದೆ ಎಂದರು.
ಜಿಪಂ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ. ವ್ಯಕ್ತಿಯ ಆರೋಗ್ಯದಲ್ಲಿ ಆಗುವ ಸಣ್ಣ ಬದಲಾವಣೆಯೂ ಮುಂದೆ ಆತನನ್ನು ದೊಡ್ಡ ಕಾಯಿಲೆಗೆ ಗುರಿ ಮಾಡುತ್ತದೆ. ಹೀಗಾಗಿ ಯಾವುದೇ ರೋಗಕ್ಕೆ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದರು.
ಮುಜುಗರದಿಂದ ತಮ್ಮಲ್ಲಿರುವ ಸಮಸ್ಯೆ ಮುಚ್ಚಿಟ್ಟು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ. ಇದರಿಂದ ಮುಂದೆ ದೊಡ್ಡ ಅನಾಹುತಗಳು ಎದುರಾಗುವ ಸಂದರ್ಭಗಳು ಬರಬಹುದು. ಆದ್ದರಿಂದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಕೆಲಸದ ಒತ್ತಡದಿಂದ ಅಧಿಕಾರಿಗಳು ಆರೋಗ್ಯದ ಕಾಳಜಿ ಮರೆಯುತ್ತಾರೆ. ಆರೋಗ್ಯ ಮುಖ್ಯ, ಆರೋಗ್ಯ, ಕೆಲಸ, ಕುಟುಂಬವನ್ನು ಸಮಾನವಾಗಿ ನಿರ್ವಹಣೆ ಮಾಡುವುದನ್ನು ಕಲಿಯಬೇಕು. ಯಾವುದೇ ಸಮಸ್ಯೆಯನ್ನು ಸಮಾಧಾನದಿಂದ ಎದುರಿಸುವುದನ್ನು ಕಲಿಯಬೇಕು ಎಂದರು.
ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಶಿಕ್ಷಣ ನೀಡಿ ಅವರು ಜೀವನದಲ್ಲಿ ಎಂತಹ ಸಮಸ್ಯೆಯನ್ನಾದರೂ ಎದುರಿಸುವಂತಹ ಶಕ್ತಿ ತುಂಬಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಮಾಡಬೇಕು. ಸರಿಯಾದ ಮಾರ್ಗದರ್ಶಕರು ಇದ್ದಾಗ ಯಾವುದೇ ವ್ಯಕ್ತಿಯು ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಬಹುದು ಎಂದರು. ಜಿಪಂ ಉಪ ಕಾರ್ಯದರ್ಶಿ ಕೃಷ್ಣಂರಾಜು ಇನ್ನಿತರರಿದ್ದರು.