ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವಷ್ಟು ಬೆಡ್ಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದಂತೆ ಅವರಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್, ಆಕ್ಸಿಜನ್ ಅಗತ್ಯವಿದೆ. ಅದರಂತೆ ಈಗಾಗಲೇ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಅಗತ್ಯವಿರುವ ಪ್ರಾಣವಾಯು ಪೂರೈಸಲು ಕ್ರಮ ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರವೂ ಸಹಕಾರ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹೊರಾಂಗಣದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮತ್ತು ಜಿಲ್ಲೆಯಲ್ಲಿನ ಆರೋಗ್ಯ ಸೌಲಭ್ಯಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಹೆಚ್ಚಳದ ಜತೆಗೆ ನೆರೆಹೊರೆ ಜಿಲ್ಲೆ ಸೋಂಕಿತರು ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಎಲ್ಲವನ್ನೂ ಸರಿದೂಗಿಸಬೇಕು. ಇದು ಸವಾಲಿನ ಕೆಲಸವಾಗಿದ್ದರೂ ಜಿಲ್ಲಾಡಳಿತ, ಕಿಮ್್ಸ ಆಸ್ಪತ್ರೆ, ಸಮರ್ಪಕವಾಗಿ ನಿರ್ವಹಿಸುತ್ತಿವೆ ಎಂದರು.
ಜಿಲ್ಲೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಕೋವಿಡ್ ನಿರೋಧಕ ಔಷಧಗಳ ಕಿಟ್ ವಿತರಣೆಗೆ ಮಹಾನಗರ ವ್ಯಾಪ್ತಿಯಲ್ಲಿ ಪಾಲಿಕೆ ಅಧಿಕಾರಿ ಅಜೀಜ್ ದೇಸಾಯಿ ಹಾಗೂ ಗ್ರಾಮೀಣ ಭಾಗದ ಉಸ್ತುವಾರಿಗಾಗಿ ಜಿಪಂ ಉಪಕಾರ್ಯದರ್ಶಿಯನ್ನು ನೇಮಿಸಲಾಗುವುದು. ಗ್ರಾಪಂ ಸಿಬ್ಬಂದಿ, ಆಶಾ, ಬೀಟ್ ಪೊಲೀಸ್ ಮತ್ತು ಅಗತ್ಯವಿದ್ದಲ್ಲಿ ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳ ಸಹಕಾರದೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚಿಸಿದರು.
ಹುಬ್ಬಳ್ಳಿ ಲೈಫ್ಲೈನ್ ಆಸ್ಪತ್ರೆಯಲ್ಲಿ ನಡೆದ ಘಟನೆ ದುರದೃಷ್ಟಕರ. ಸಮರ್ಪಕ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸಚಿವರು ಜಿಲ್ಲಾ ಆರೋಗ್ಯಾಧಿಕಾರಿಗೆ ನಿರ್ದೇಶಿಸಿದರು. ಇಂಥ ಘಟನೆ ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಅಡಚಣೆ ಆಗದಂತೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಜಿಲ್ಲಾಸ್ಪತ್ರೆ ಹಾಗೂ ಕಿಮ್್ಸ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಜನರಿಗೆ ಹೆಚ್ಚು ಉಪಯುಕ್ತವಾಗಿದೆ. ಆಸ್ಪತ್ರೆಗಳಲ್ಲಿ ತಕ್ಷಣಕ್ಕೆ ಬೆಡ್ ಸಿಗುವಂತೆ, ರೆಮ್ಸಿವಿರ್ ಔಷಧ ಲಭಿಸುವಂತೆ ಮತ್ತು ಕೋವಿಡ್ ಚಿಕಿತ್ಸೆಗೆ ಬರುವ ಸೋಂಕಿತರು ಚಿಕಿತ್ಸೆಗೆ ಅಲೆದಾಡದಂತೆ ಸ್ಪಂದಿಸಬೇಕು ಎಂದರು.
ಕೋವಿಡ್ ಸೋಂಕಿನ ಲಕ್ಷಣವಿರುವವರು ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಹೋಂ ಐಸೋಲೇಷನ್ ಆಗುತ್ತಿದ್ದಾರೆ. ಆದರೆ ಕೆಲವೊಬ್ಬರು ಲಕ್ಷಣರಹಿತರಿರುವ ಕೋವಿಡ್ ಸೋಂಕಿತರು ಕೋವಿಡ್ ಟೆಸ್ಟಿಂಗ್ ಅಥವಾ ಚಿಕಿತ್ಸೆಗೆ ಬರದೆ ಉಳಿಯುತ್ತಿರುವುದರಿಂದ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದೆ. ಹೀಗಾಗಿ ಹೋಂ ಐಸೋಲೇಷನ್ನಲ್ಲಿರುವವರಿಗೆ ಸರ್ಕಾರ ನಿಗದಿಪಡಿಸಿರುವ ಔಷಧಗಳನ್ನು ಒಂದು ಕಿಟ್ ಮಾಡಿ ಜಿಲ್ಲೆಯ ಎಲ್ಲ ಮನೆಗಳಿಗೆ ತಲುಪಿಸುವ ಕಾರ್ಯವಾಗಬೇಕು. ಇದಕ್ಕೆ ಮಾನವ ಸಂಪನ್ಮೂಲದ ಅಗತ್ಯವಿದ್ದಲ್ಲಿ ಎನ್ಜಿಒಗಳ ಸಹಾಯ ಪಡೆಯಬಹುದು. ಆರಂಭದಲ್ಲಿ ಸ್ಲಂ ಪ್ರದೇಶ, ಕೂಲಿ ಕಾರ್ವಿುಕರು ವಾಸಿಸುವ ಮತ್ತು ದುಡಿಯುವ ವರ್ಗದ ಜನರಿರುವ ಪ್ರದೇಶಗಳು ಸೇರಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಿಟ್ ವಿತರಿಸಲು ಕ್ರಮವಹಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ಜಿಲ್ಲೆಯ ಅನೇಕ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳಿದ್ದು, ಬಳಕೆ ಮಾಡದೆ ಖಾಲಿ ಉಳಿದಿರುವ ವೆಂಟಿಲೇಟರ್ಗಳನ್ನು ಕಿಮ್್ಸ ಹಾಗೂ ಜಿಲ್ಲಾಸ್ಪತ್ರೆಗಳಿಗೆ ನೀಡಬೇಕು. ಕೋವಿಡ್ ನಿಯಂತ್ರಣವಾದ ಮೇಲೆ ಮರಳಿ ಆಯಾ ಆಸ್ಪತ್ರೆಗಳಿಗೆ ತಲುಪಿಸಬೇಕು ಎಂದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತ ಲಾಭೂರಾಮ, ಜಿಪಂ ಸಿಇಒ ಡಾ. ಬಿ. ಸುಶೀಲಾ, ಎಸ್ಪಿ ಪಿ. ಕೃಷ್ಣಕಾಂತ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕಿಮ್್ಸ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ, ಮುಖ್ಯ ಆಡಳಿತಾಧಿಕಾರಿ ಷಣ್ಮುಖಪ್ಪ, ಡಾ. ಸುಜಾತಾ ಹಸವಿಮಠ, ಡಾ. ಎಸ್.ಎಂ. ಹೊನಕೇರಿ, ಡಾ. ಲಕ್ಷ್ಮೀಕಾಂತ ಲೋಕೊರೆ, ಡಾ. ರಾಘವೇಂದ್ರ ನಾಯಕ, ತಹಸೀಲ್ದಾರ ಸಂತೋಷ ಬಿರಾದಾರ, ಇತರರು ಇದ್ದರು.