ಜಿಲ್ಲೆ

ಪ್ರಾಣ ಪಣಕ್ಕಿಟ್ಟು ಸೋಂಕಿತರ ಅಂತ್ಯಕ್ರಿಯೆ

ಸ.ದಾ. ಜೋಶಿ ಬೀದರ್

ಕರೊನಾ ಸೋಂಕಿತ ಎಂದರೆ ಕುಟುಂಬದವರೇ ಹೌಹಾರಿ, ಮಾರುದ್ದ ದೂರ ಸರಿಯುವ ವಿಚಿತ್ರ ಸ್ಥಿತಿ ಇಂದು ಕಾಣಲಾಗುತ್ತಿದೆ. ಇಂಥದರಲ್ಲಿ ಇಲ್ಲಿನ ಸ್ವಯಂ ಸೇವಕರ ತಂಡವೊಂದು ಜೀವದ ಹಂಗು ತೊರೆದು, ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವ ವಿಶಿಷ್ಟ ಕಾಯಕದಲ್ಲಿ ತೊಡಗಿ ಮಾನವೀಯತೆ ಮೌಲ್ಯ ಎತ್ತಿ ಹಿಡಿದಿದೆ.

ಹೌದು. ನಗರದ ಚಿದ್ರಿ ರಸ್ತೆಯ ಹೈದರ್ ಕಾಲನಿಯ ಮಹ್ಮದ್ ಮಾಜೀದ್ ಬಿಲಾಲ್(30) ನೇತೃತ್ವದ ಆರು ಸ್ವಯಂ ಸೇವಕರ ತಂಡ ಕರೊನಾ ಸೋಂಕಿತರ ಮೃತದೇಹಗಳಿಗೆ ಮುಕ್ತಿ ಕೊಡುವಲ್ಲಿ ಸಕ್ರಿಯವಾಗಿದೆ. ಯಾವುದೇ ಜಾತಿ, ಮತ, ಪಂಥದ ಭೇದ ಮಾಡದೆ ಸೋಂಕಿತರ ಶವಗಳಿಗೆ ಅವರವರ ಧರ್ಮದ ಸಂಪ್ರದಾಯ, ವಿಧಿ-ವಿಧಾನಗಳ ಪ್ರಕಾರ ಮುಕ್ತಿ ನೀಡುತ್ತಿದೆ. ಈವರೆಗೆ ತಂಡದಿಂದ 79 ಸೋಂಕಿತ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಿರುವುದು ವಿಶೇಷ.

ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳದ ಮುಖಾಂತರ ಬಿಲಾಲ್ ಅವರು ಕಳೆದ ಹಲವು ವರ್ಷಗಳಿಂದ ವಿವಿಧ ಸಾಮಾಜಿಕ ಚಟವಟಿಕೆಗಳನ್ನು ನಡೆಸುತ್ತಿದ್ದಾರೆ. ಅಲ್ಲಲ್ಲಿ ಅನಾಥ ಶವಗಳು ಸಿಕ್ಕರೆ ಸ್ಥಳಕ್ಕೆ ಧಾವಿಸಿ, ಅವುಗಳಿಗೆ ಮುಕ್ತಿ ನೀಡುವಲ್ಲಿ ತೊಡಗಿದ್ದಾರೆ. ಈಗ ಕರೊನಾದಿಂದ ಸಾವಿಗೀಡಾದವರ ಸಂಸ್ಕಾರಕ್ಕೆ ಸೈ ಎಂದಿದ್ದಾರೆ. ಇವರ ನೇತೃತ್ವದ ತಂಡದಲ್ಲಿ ಮುನೀರ್ ಅಹ್ಮದ್, ಕೃಷ್ಣಾ ಎಸ್.ಕೆ., ಲಕ್ಷ್ಮೀಕಾಂತ, ವಾಸೀಮ್ ಬಾಬಾ ಮತ್ತು ಆರಿಫ್ ಇದ್ದಾರೆ. ಈ ತಂಡದ ಕಾರ್ಯ ಮಾದರಿ ಎನಿಸಿದೆ.

ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವುದು ಸಾಕಷ್ಟು ರಿಸ್ಕಿ. ಹಲವೆಡೆ ಕುಟುಂಬದವರೇ ಇದಕ್ಕೆ ಹೆದರುತ್ತಿದ್ದಾರೆ. ಅಂತ್ಯಕ್ರಿಯೆ ವೇಳೆ ಅನೇಕರಿಗೆ ಸೋಂಕು ತಗುಲಿ ಸಾಕಷ್ಟು ಸಂಕಷ್ಟಗಳು ಎದುರಾಗುತ್ತಿವೆ. ಈ ಎಲ್ಲ ಆತಂಕ, ಅಪಾಯದ ಮಧ್ಯೆ ಈ ತಂಡ ಸೇವಾಭಾವದೊಂದಿಗೆ ಅಂತ್ಯಕ್ರಿಯೆ ಮಾಡುತ್ತಿದೆ. ಯಾರದೇ ಆರ್ಥಿಕ ನೆರವು, ಗೌರವ ಧನ ಇಲ್ಲದೆ ಉಚಿತವಾಗಿ ಈ ಕಾಯಕದಲ್ಲಿ ತೊಡಗಿ ಭೇಷ್ ಎನಿಸಿಕೊಂಡಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ.

ಸೋಂಕಿತರ ಮೃತದೇಹ ಅಂತ್ಯಕ್ರಿಯೆಗೆ ಈ ತಂಡ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಅನುಮತಿ ಪಡೆದಿದೆ. ಪಿಪಿಇ ಕಿಟ್, ಮಾಸ್ಕ್, ಗ್ಲೌಜ್ ಸೇರಿ ಎಲ್ಲ ಸುರಕ್ಷತಾ ಸಾಧನಗಳನ್ನು ಇಲಾಖೆ ಒದಗಿಸುತ್ತಿದೆ. ಮೊದಲು ಬ್ರಿಮ್ಸ್ನಲ್ಲಿರುವ ಶೃದ್ಧಾಂಜಲಿ ವಾಹನ ಮೂಲಕ ವಿವಿಧೆಡೆ ತೆರಳಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ಇದೊಂದೇ ವಾಹನ ಬಳಕೆ ಹಾಗೂ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದ ಕಾರಣ ಇಲ್ಲಿನ ಜಿ.ಎನ್. ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ವಾಲಿಶ್ರೀ ಆಸ್ಪತ್ರೆ ಅಧ್ಯಕ್ಷ ಡಾ. ರಜನೀಶ್ ವಾಲಿ ಅವರು ತಲಾ ಒಂದು ಆಂಬುಲೆನ್ಸ್ ಒದಗಿಸಿದ್ದಾರೆ. ಇವುಗಳನ್ನು ಬಳಸಿಕೊಂಡು ಬಹುತೇಕ ಸೋಂಕಿತರ ಶವ ಸಂಸ್ಕಾರ ಮಾಡುವಲ್ಲಿ ತೊಡಗಿದೆ. ಜಿಲ್ಲೆಯಲ್ಲಿ ಈವರೆಗೆ 149 ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ 79 ಅಂತ್ಯಕ್ರಿಯೆ ಬಿಲಾಲ್ ತಂಡ ಮಾಡಿರುವುದು ವಿಶೇಷ. ಬಿಲಾಲ್ ಸಂಪರ್ಕ ಸಂಖ್ಯೆ 8746999222 ಇದೆ.

ಯಾರಿಗೂ ತಟ್ಟಿಲ್ಲ ವೈರಸ್
ಅಂತ್ಯಕ್ರಿಯೆ ಮಾಡುವ ಮಾಹಿತಿ ಪಡೆಯುತ್ತಲೇ ಆಂಬುಲೆನ್ಸ್ನೊಂದಿಗೆ ಕೋವಿಡ್ ಆಸ್ಪತ್ರೆಗೆ ತೆರಳುವ ತಂಡದ ಸದಸ್ಯರು, ಮೃತದೇಹಕ್ಕೆ ಅಂತ್ಯಕ್ರಿಯೆ ಮಾಡುವ ಸ್ಥಳಕ್ಕೆ (ಜಿಲ್ಲೆಯಲ್ಲಿ ಎಲ್ಲೇ ಇದ್ದರೂ ಅಲ್ಲಿಗೆ) ಒಯ್ಯುತ್ತಾರೆ. ಕುಟುಂಬದವರು ನೀಡುವ ಸೂಚನೆ ಪ್ರಕಾರ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಅವರವರ ಧರ್ಮಗಳ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನಡೆಸುತ್ತಾರೆ. ಕೋವಿಡ್ ನಿಯಮ ಪಾಲನೆಯೊಂದಿಗೆ ಶವಸಂಸ್ಕಾರ ನಡೆಸುತ್ತಿರುವುದು ಮತ್ತು ಸಾಮಾಜಿಕ ಸೇವೆಯ ಶ್ರೀರಕ್ಷೆ ಫಲ ಎಂಬಂತೆ ಈವರೆಗೂ ತಂಡದ ಯಾರಿಗೂ ಸೋಂಕು ಅಂಟಿಲ್ಲ ಎಂಬುದು ಗಮನಾರ್ಹ.

ಮನೆ ಬಿಟ್ಟು ಐದು ತಿಂಗಳಾಯಿತು!
ಸೋಂಕಿತರ ಶವ ಸಂಸ್ಕಾರ ಕಾಯಕ ಮಾಜೀದ್ ಬಿಲಾಲ್ ತಂಡದ ಸದಸ್ಯರಿಗೆ ಐದು ತಿಂಗಳಿಂದ ಮನೆ ಬಿಡಿಸಿದೆ. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡಿ, ಪ್ರಾಣ ಹಿಂಡುವ ಅಪಾಯವಿರುವ ಕಾರಣ ಎಲ್ಲರೂ ನಗರದ ಖಾಸಗಿ ಲಾಡ್ಜ್ ನಲ್ಲಿ ಉಳಿದಿದ್ದೇವೆ. ಲಾಡ್ಜ್ ಬಾಡಿಗೆ, ಊಟ ಎಲ್ಲವೂ ಸ್ವತಃ ಭರಿಸುತ್ತಿದ್ದೇವೆ. ಯಾರ ನೆರವು ಪಡೆದಿಲ್ಲ. ಈವರೆಗೆ ಅದ್ಹೇಗೋ ಕೆಲಸವನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಆದರೆ ಈಗ ಬಹಳ ಕಷ್ಟವಾಗುತ್ತಿದೆ. ನಿತ್ಯವೂ ತಂಡದ ಖರ್ಚು, ವೆಚ್ಚ 5 ಸಾವಿರ ರೂ.ಇದೆ ಎನ್ನುತ್ತಾರೆ ಬಿಲಾಲ್. ಪತ್ನಿ, ಇಬ್ಬರು ಮಕ್ಕಳು, ತಂದೆ, ತಾಯಿ ಸೇರಿ ಕುಟುಂಬದ ಇತರರು ಮನೆಯಲ್ಲಿದ್ದಾರೆ. ನಮ್ಮ ಸೇವೆಯೇ ಕರೊನಾ ಸೋಂಕಿನ ನಡುವೆ ಇದೆ. ಹೀಗಾಗಿ ನಮಗೆ ಏನೇ ಆದರೂ ಕುಟುಂಬದವರಿಗೆ ಇದು ಅಂಟದಿರಲಿ ಎಂಬ ಕಾರಣಕ್ಕೆ ಮನೆಗೆ ಹೋಗಿಲ್ಲ. ಮಕ್ಕಳು ಸೇರಿದಂತೆ ಮನೆಯವರಿಗೆ ನೋಡುವಾಸೆ ಆದಾಗ ಮನೆ ಹೊರಗಿನಿಂದಲೇ ನೋಡಿ ಬಂದಿದ್ದೇವೆ. ವಿಡಿಯೋ ಕಾಲ್ ಸಮಾಧಾನ ನೀಡುತ್ತಿದೆ ಎಂದು ಬಿಲಾಲ್ ಹೇಳಿದರು. ಉಳಿದೆಲ್ಲ ಸದಸ್ಯರ ಅಭಿಪ್ರಾಯವೂ ಇದಕ್ಕೆ ಭಿನ್ನವಾಗಿರಲಿಲ್ಲ. ತಂಡದ ಕುಟುಂಬದವರ ಹಿತ ಗಮನದಲ್ಲಿಟ್ಟುಕೊಂಡ ಬಿಲಾಲ್ ಅವರು ಸ್ವತಃ ಎಲ್ಲ ಸದಸ್ಯರ 1 ಕೋಟಿ ರೂ. ಜೀವ ವಿಮೆ ಮಾಡಿಸಿದ್ದಾರೆ. ದಾನಿಯೊಬ್ಬರು ತಂಡದ ಎಲ್ಲ ಸದಸ್ಯರ 2.50 ಲಕ್ಷ ರೂ. ಆರೋಗ್ಯ ವಿಮೆ ಮಾಡಿಸಿದ್ದಾರೆ. ಈ ತಂಡದ ಎಲ್ಲ ಸದಸ್ಯರು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಲಾಕ್ ಡೌನ್ ನಂತರ ಸಾಮಾಜಿಕ ಸೇವೆ ಭಾಗವಾಗಿ ಈ ಕೆಲಸದಲ್ಲಿ ತೊಡಗಿದ್ದಾರೆ. ಉದ್ಯೋಗ ಬಿಟ್ಟು ಪೂರ್ಣಪ್ರಮಾಣದಲ್ಲಿ ಈ ಕಾಯಕಕ್ಕೆ ಸಮಯ ಮೀಸಲಿಟ್ಟಿದ್ದಾರೆ.

ರಾತ್ರಿಯೂ ನಿಂತಿಲ್ಲ ಸೇವೆ…
ಬಿಲಾಲ್ ನೇತೃತ್ವದ ತಂಡ ಹಗಲು ಮಾತ್ರವಲ್ಲ, ತುತರ್ು ಸಂದರ್ಭಗಳಲ್ಲಿ ರಾತ್ರಿಯಲ್ಲೂ ಸೋಂಕಿತರ ಅಂತ್ಯಕ್ರಿಯೆ ನಡೆಸುವ ಮೂಲಕ ಸಾಹಸ ಮೆರೆಯುತ್ತಿದೆ. ಇತ್ತೀಚೆಗೆ ಭಾಲ್ಕಿಯಲ್ಲಿ ಮೃತಪಟ್ಟಿದ್ದ ಸೋಂಕಿತರ ಅಂತ್ಯಕ್ರಿಯೆ ಬೆಳಗ್ಗಿನ ಜಾವ 3ರ ಹೊತ್ತಿಗೆ ನೆರವೇರಿಸಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಭಾಲ್ಕಿಯಲ್ಲಿ ಅಂತ್ಯಕ್ರಿಯೆ ಮಾಡುವುದಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ತಡರಾತ್ರಿ 1.30ರ ಸುಮಾರಿಗೆ ಫೋನ್ ಮಾಡಿ ಹೇಳಿದ್ದರು. ತಕ್ಷಣವೇ ನಮ್ಮ ತಂಡ ಇಲ್ಲಿಂದ ಶವ ಒಯ್ದು ಬೆಳಗ್ಗಿನ ಜಾವ 3ರ ಹೊತ್ತಿಗೆ ಅಂತ್ಯಕ್ರಿಯೆ ಮುಗಿಸಿದೆ. ಅಂತ್ಯಕ್ರಿಯೆ ಮಾಡಬೇಕಿದ್ದ ಇನ್ನೂ ಮೂರು ಶವಗಳು ಬ್ರಿಮ್ಸ್ ಶವಾಗಾರದಲ್ಲಿದ್ದವು. ಭಾಲ್ಕಿಯಿಂದ ವಾಪಸ್ಸಾಗಿ ನೇರ ಬ್ರಿಮ್ಸ್ಗೆ ತೆರಳಿ ಈ ಮೂರೂ ಅಂತ್ಯಕ್ರಿಯೆ ನೆರವೇರಿಸಲಾಯಿತು. ಒಂದು ದಿನ ಹಗಲು-ರಾತ್ರಿ ಎನ್ನದೇ ಗರಿಷ್ಠ 6 ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಮಾಜೀದ್ ಬಿಲಾಲ್ ಹೇಳುತ್ತಾರೆ.

ಕರೊನಾ ಸೋಂಕಿತರ ಅಂತ್ಯಕ್ರಿಯೆ ಮಾಡುವುದು ಸಾಕಷ್ಟು ರಿಸ್ಕಿ ಕೆಲಸ. ಆದರೆ ಬಿಲಾಲ್ ನೇತೃತ್ವದ ತಂಡವು ಜೀವಕ್ಕಿಂತಲೂ ಮಾನವೀಯ ಕಾರ್ಯ ದೊಡ್ಡದು ಎಂಬ ತತ್ವಕ್ಕೆ ಬದ್ಧವಾಗಿ ಈ ಕಾರ್ಯದಲ್ಲಿ ತೊಡಗಿರುವುದು ಮಾದರಿ. ಜಿಲ್ಲಾಡಳಿತವು ಈ ತಂಡಕ್ಕೆ ಎಲ್ಲ ಸಹಾಯ, ಸಹಕಾರ ನೀಡುತ್ತಿದೆ. ಸಮಾಜದ ಪ್ರತಿಯೊಬ್ಬರೂ ಈ ರೀತಿಯ ಸೇವಕರಿಗೆ ಪ್ರೋತ್ಸಾಹಿಸಬೇಕು. | ರಾಮಚಂದ್ರನ್, ಜಿಲ್ಲಾಧಿಕಾರಿ
ಮಾನವೀಯತೆಗಿಂತ ದೊಡ್ಡದು ಯಾವುದೂ ಇಲ್ಲ. ಹುಟ್ಟಿನ ನಂತರ ಸಾವು ತಪ್ಪಿದ್ದಲ್ಲ. ಆದರೆ ಜೀವಿತಾವಧಿಯಲ್ಲಿ ಮಾಡುವ ಉತ್ತಮ ಕೆಲಸಗಳು ಬದುಕನ್ನು ಸಾರ್ಥಕಗೊಳಿಸುತ್ತವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಯಾರಿಂದಲೂ ವೇತನ, ಗೌರವ ಧನ ಪಡೆಯದೆ ಆತ್ಮತೃಪ್ತಿಗಾಗಿ, ಜೀವದ ಹಂಗು ತೊರೆದು ಈ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದೇವೆ. ಈವರೆಗೆ 79 ಅಂತ್ಯಕ್ರಿಯೆ ಮಾಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಇತರರ ಪ್ರೋತ್ಸಾಹ ನಮಗೆ ಇನ್ನಷ್ಟು ಜೋಶ್ ನೀಡಿದೆ. | ಮಾಜೀದ್ ಬಿಲಾಲ್, ಟೀಮ್ ಮುಖ್ಯಸ