ಚಾಮರಾಜನಗರ: ಬೇಸಿಗೆ ಕಾಲದಲ್ಲಿ ಗುಟುಕು ನೀರು ಪ್ರಾಣವನ್ನೇ ಉಳಿಸಬಲ್ಲದು, ಹಾಗೆಯೇ ನೀರಿನೊಂದಿಗಿನ ಸರಸ ಪ್ರಾಣವನ್ನೇ ತೆಗೆದುಬಿಡಬಲ್ಲದು.
ಜಿಲ್ಲೆಯಲ್ಲಿ ಒಂದೆಡೆ ಕುಡಿಯುವ ನೀರಿಗಾಗಿ ಸಾರ್ವಜನಿಕರ ಪರದಾಟ ತಪ್ಪುತ್ತಿಲ್ಲ. ಮತ್ತೊಂದೆಡೆ ಬಿಸಿಲಿನ ಬೇಗೆಯನ್ನು ತಣಿಸಿಕೊಳ್ಳಲು ನದಿ, ಕೆರೆಗಳಲ್ಲಿ ಈಜಲು ಹೋಗುತ್ತಿರುವವರ ಪ್ರಾಣವನ್ನು ನೀರು ನುಂಗಿ ಹಾಕುತ್ತಿದೆ. ಈಗಾಗಲೇ ಐವರು ನೀರುಪಾಲಾಗಿದ್ದಾರೆ. ಇದರಲ್ಲಿ ಕುಟುಂಬಗಳ ಪಾಲಿಗೆ ಭವಿಷ್ಯದ ಬೆಳಕಾಗಿದ್ದ ನಾಲ್ವರು ಬಾಲಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಓರ್ವ ಯುವಕ ನೀರು ಪಾಲಾಗಿದ್ದಾನೆ.
ಜಲ ಸಮಾಧಿಯಾದರು:
ಕೆಲವು ದಿನಗಳ ಹಿಂದಷ್ಟೇ ಕೊಳ್ಳೇಗಾಲದ ದೇವಾಂಗಪೇಟೆಯ ಭರತ್(17) ಮತ್ತು ಲಿಖಿತ್ (17) ತಿ.ನರಸೀಪುರ ತಾಲೂಕಿನ ಮೇದನಿ ಗ್ರಾಮದ ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದರು. ಕೊಳ್ಳೇಗಾಲದ ಶಿವನಸಮುದ್ರ ವೆಸ್ಲಿ ಸೇತುವೆ ಬಳಿ ಈಜಲು ಹೋಗಿ ಬೆಂಗಳೂರಿನ ಜೆ.ಪಿ.ನಗರದ ನಿವಾಸಿ ಶಾಹಿಲ್ ಪಾಷ(23) ನೀರಿನಲ್ಲಿ ಮುಳುಗಿ ಮೃತಪಟ್ಟ. ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಕೆರೆಯಲ್ಲಿ ಅಭಯ್ ಗೌಡ (13), ಕೃಷ್ಣಾಪುರದ ವೃಷಬೇಂದ್ರ (14) ಜಲ ಸಮಾಧಿಯಾದರು.
ಮತ್ತಿನ್ಯಾರೋ, ಜವರಾಯನೇ ಬಲ್ಲ:
ಜಿಲ್ಲೆಯ ಕೆರೆಗಳು, ನದಿಯಲ್ಲಿ ನೀರುಪಾಲಾಗುತ್ತಿರುವವರು ಸಾಲಿನಲ್ಲಿ ಮತ್ಯಾವ ಕುಟುಂಬದ ಕುಡಿ ಇದೆಯೋ ಜವರಾಯೇ ಬಲ್ಲ.
ಬೇಸಿಗೆ ರಜೆಯಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ಯುವಕರ ಗುಂಪು ಕೆರೆ, ನದಿಯಲ್ಲಿ ಈಜಿ ನೀರಿನಾಟವಾಡುತ್ತಿದ್ದಾರೆ. ಬಿರು ಬೇಸಿಗೆ ನೀರಿಗೆ ಇಳಿಯುವಂತೆ ಪ್ರೇರೇಪಿಸುತ್ತಿದೆ. ಈಜು ಬಾರದೆ ಇರುವವರೂ ನೀರಿಗೆ ಇಳಿಯುತ್ತಿದ್ದಾರೆ. ಈಜು ಕಲಿತವರು ಕೆರೆ ಮತ್ತು ನದಿಯ ಆಳ ತಿಳಿಯದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮನೆಯಲ್ಲಿ ಹೇಳದೆ ಸ್ನೇಹಿತರೊಂದಿಗೆ ಈಜಲು ಹೋಗಿ ಸಾಯುತ್ತಿರುವವರಲ್ಲಿ ಶಾಲಾ ವಿದ್ಯಾರ್ಥಿಗಳೇ ಹೆಚ್ಚು. ನೀರಿನಲ್ಲಿ ಮುಳುಗಿ ಮೇಲೇಳಲಾಗದವರನ್ನು ಹುಡುಕಲು ಎರಡ್ಮೂರು ದಿನಗಳ ಕಾರ್ಯಾಚರಣೆ ನಡೆಯುವಾಗ ಮನೆಯ ಮಗ ಬದುಕಿ ಬರಲೆಂದು ತಂದೆ-ತಾಯಿ ಪ್ರಾರ್ಥನೆ ಮಾಡುವುದು, ಬಳಿಕ ಶವ ಸಿಕ್ಕಾಗ ಹೆತ್ತವರ ಕಣ್ಣೀರ ಕಟ್ಟೆಯೊಡೆಯುತ್ತಿದೆ. ಇಷ್ಟಾದರೂ ಮತ್ತೆ ಕೆಲವು ದಿನಗಳ ಬಳಿಕ ಇನ್ಯಾರೋ ಹುಡುಗರು ಈಜಲು ಕೆರೆಗೋ, ನದಿಗೋ ಇಳಿಯುತ್ತಾರೆ. ಮತ್ತೆ ಜಲ ಸಮಾಧಿಯಾಗುವ ಸಾವಿನ ಸರಣಿ ಮುಂದುವರೆಯುತ್ತದೆ.
ಈಜುಕೊಳ ನಿರ್ಮಾಣವಾಗಲಿ:
ಚಾಮರಾಜನಗರದಲ್ಲಿ ಒಲಂಪಿಕ್ ಮಾದರಿಯ (50 ಮೀಟರ್)ಈಜುಕೊಳವನ್ನು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್‌ನಲ್ಲಿ ೋಷಣೆ ಮಾಡಿದ್ದಾರೆ. ಪ್ರಸ್ತುತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಈಜುಕೊಳವಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈಜುಕೊಳ ನಿರ್ಮಾಣವಾದರೆ ಆಸಕ್ತರು ಬಳಸಿಕೊಳ್ಳುತ್ತಾರೆ.
ಮರೆಯಲಾಗದ ದುರ್ಘಟನೆ:
ಬಾಲಕರು ಮತ್ತು ಯುವಕರು ಈಜಲು ಹೋಗಿ ನೀರುಪಾಲಾದರೆ ತಾಯಿ ತನ್ನ ಇಬ್ಬರು ಮಕ್ಕಳನ್ನು ಬಟ್ಟೆ ತೊಳೆಯಲು ಹೋಗಿ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸತ್ತಂತಹ ದುರ್ಘಟನೆಯೂ ಜಿಲ್ಲೆಯಲ್ಲಿ ನಡೆದಿತ್ತು. 2024ರ ಏ.5ರಲ್ಲಿ ಹನೂರು ತಾಲೂಕಿನ ಗೋಪಿನಾಥಂ ಜಲಾಶಯದಲ್ಲಿ ಬಟ್ಟೆ ಒಗೆಯಲು ಹೋಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದರು. ಪುದೂರಿನ ಮೀನಾ(34) ಮತ್ತು ಇವರ ಮಕ್ಕಳಾದ ಪವಿತ್ರಾ(14), ಕೀರ್ತಿ(11) ಮೃತಪಟ್ಟರು. ಇವರೊಂದಿಗೆ ಹೋಗಿದ್ದ ಮತ್ತೊಬ್ಬ ಮಗ ಸುರೇಂದ್ರನಿಂದ ತಾಯಿ ಮತ್ತು ಸಹೋದರಿಯರು ನೀರಿನಲ್ಲಿ ಮುಳುಗಿ ಸತ್ತಿರುವುದು ಗೊತ್ತಾಗಿತ್ತು.
ಕರುಣಾಜನಕ ಕಥೆ: ಗಡಿಜಿಲ್ಲೆ ಚಾಮರಾಜನಗರದಲ್ಲಿ ನೀರುಪಾಲಾದವರ ಪಟ್ಟಿಯಲ್ಲಿ ಗರ್ಭೀಣಿ ಮಗಳನ್ನು ನೋಡಲು ನದಿಯಲ್ಲಿ ಈಜಿ ದಡ ಸೇರಲಾಗದೆ ಮೃತಪಟ್ಟ ತಂದೆಯ ಕರುಣಾಜನಕ ಕಥೆಯೂ ಒಂದಿದೆ. ತಮಿಳುನಾಡಿನ ಈರೋಡ್ ಪಳ್ಳಿಪಾಲ್ಯ ಪೆರುಮಾಳ್(60) ಗೋಪಿನಾಥಂನ ಪುದೂರಿನಲ್ಲಿ ವಾಸವಿದ್ದರು. 2020ರ ಕೋವಿಡ್ ಸಂದರ್ಭದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕರ್ನಾಟಕ-ತಮಿಳುನಾಡು ಗಡಿ ಬಂದ್ ಮಾಡಲಾಗಿತ್ತು. ಪೆರುಮಾಳ್ ಮಗಳು ಹೆರಿಗೆಗಾಗಿ ಮೆಟ್ಟೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಮಗಳನ್ನು ನೋಡಲು ಹೋದ ತಂದೆಗೆ ಚೆಕ್‌ಪೋಸ್ಟ್‌ನಲ್ಲಿ ತೆರಳಲು ಸಾಧ್ಯವಾಗದೆ ಇದ್ದಾಗ ಪಾಲಾರ್ ಹಳ್ಳಕ್ಕೆ ಇಳಿದು ತಮಿಳುನಾಡಿನ ಕಡೆಯ ದಡ ಸೇರುವಾಗ ಮಧ್ಯೆ ಈಜಲಾಗದೆ ನೀರುಪಾಲಾದರು.
ಬಿಸಿಲಿನ ತಾಪದಲ್ಲಿ ಆಳ-ಅಗಲ ತಿಳಿಯದೆ ನೀರಿಗೆ ಇಳಿಯಬಾರದು. ಸೆಲ್ಫಿ ಹುಚ್ಚಿಗೆ ಕೆರೆ, ನದಿಗಳ ಬಳಿ ಹೋಗಬಾರದು. ಹಸು, ಎಮ್ಮೆ, ದನ-ಕರುಗಳನ್ನು ತೊಳೆಯಲು ಕೆರೆಗಳಿಗೆ ಹೋಗುವ ಪಾಲಕರು ತಮ್ಮೊಂದಿಗೆ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಕೆರೆ-ನದಿಗಳಲ್ಲಿ ನೀರಿನಲ್ಲಿ ಇಳಿಯಲು ಬಿಡಬಾರದು. ಗುರುರಾಜ್, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ, ಚಾಮರಾಜನಗರ