ಸಾಗರ: ಪ್ರಾಚೀನ ದೇವಾಲಯಗಳು ನಮ್ಮ ಸನಾತನ ಸಂಸ್ಕೃತಿಯನ್ನು ಬಿಂಬಿಸುತ್ತವೆ. ದೇವಾಲಯಗಳು ಶ್ರದ್ಧಾಭಕ್ತಿಯ ಪ್ರತೀಕ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಸಾಗರದ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಶ್ರೀ ವೀರೇಶ್ವರ ದೇವಸ್ಥಾನದ ಮರು ನಿರ್ಮಾಣ ಮತ್ತು ರಥಬೀದಿಯಲ್ಲಿ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಹರದೂರು ದುರ್ಗಾಂಬಾ ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ರಮದ ನಂತರ ಸೋಮವಾರ ಆಶೀರ್ವಚನ ನೀಡಿದರು.
ಪ್ರಾಚೀನ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸುವುದು ಹೆಚ್ಚು ಅರ್ಥಪೂರ್ಣವಾದ ಕೆಲಸ. ದೇವರು, ದೇವಸ್ಥಾನಗಳನ್ನು ಚೆನ್ನಾಗಿ ಇಟ್ಟುಕೊಂಡರೆ ಊರಿಗೆ ನೆಮ್ಮದಿ ಲಭಿಸುತ್ತದೆ. ಧರ್ಮ ನಿಷ್ಠೆಯಿಂದ ಮಾತ್ರ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬಹುದು. ಸಾಗರದಲ್ಲಿ ಈ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು ನಮಗೆ ತುಂಬ ಸಂತೋಷ ತಂದಿದೆ ಎಂದು ಹೇಳಿದರು.
ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಊರಿನ ಹೃದಯ ಭಾಗದಲ್ಲಿರುವ ಗಣಪತಿ ಕೆರೆಯ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಹತ್ತು ಕೋಟಿ ರೂ. ವೆಚ್ಚದಲ್ಲಿ ಗಣಪತಿ ದೇವಸ್ಥಾನವನ್ನು ಸುಂದರವಾಗಿ ನಿರ್ಮಿಸಲಾಗುತ್ತದೆ. ಸರ್ಕಾರ ಗಣಪತಿ ದೇವಸ್ಥಾನದ ಅಭಿವೃದ್ಧಿಗೆ 1 ಕೋಟಿ ರೂ. ಬಿಡುಗಡೆ ಮಾಡಿದ್ದು ಸಾಗರದ ಮಾರ್ಕೇಟ್ ರಸ್ತೆಯ ಶ್ರೀ ವೀರೇಶ್ವರ ದೇವಸ್ಥಾನದ ಜೀರ್ಣೋದ್ಧಾರವನ್ನೂ ಮಾಡಲಾಗುವುದು ಎಂದರು.
ಹರದೂರು ದುರ್ಗಾಂಬಾ ದೇವಸ್ಥಾನದ ವಿಶ್ವಸ್ತ ಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್ ಮಾತನಾಡಿ, ಸಾಗರ ಜನತೆಯ ಸಹಕಾರದಿಂದ ಕಾರ್ಯಕ್ರಮಗಳು ಅತ್ಯಂತ ವ್ಯವಸ್ಥಿತವಾಗಿ ನಡೆದಿವೆ. ಶೃಂಗೇರಿ ಜಗದ್ಗುರುಗಳು ನಮ್ಮೆಲ್ಲರಿಗೂ ಆಶೀರ್ವಾದ ಮಾಡಿದ್ದಾರೆ. ಬರುವ ದಿನಗಳಲ್ಲಿ ಶ್ರೀಗಳ ಚಾತುರ್ಮಾಸ್ಯ ಅಥವಾ ಶಂಕರ ಜಯಂತಿ ಕಾರ್ಯಕ್ರಮ ಇಲ್ಲಿಯೇ ನಡೆಯಬೇಕು ಎಂಬುದು ಭಕ್ತರ ಅಭಿಲಾಷೆಯಾಗಿದೆ ಎಂದು ತಿಳಿಸಿದರು.
ಧರ್ಮದ ಸಮಸ್ಯೆ ಬಂದಾಗ, ಜಿಜ್ಞಾಸೆ ಏರ್ಪಟ್ಟಾಗ ಅದಕ್ಕೆಲ್ಲ ಉತ್ತರ ನೀಡುವ ಸಾಮರ್ಥ್ಯ ಶೃಂಗೇರಿ ಶ್ರೀಪೀಠಕ್ಕೆ ಇದೆ. ಹಾಗಾಗಿ ನಾವೆಲ್ಲರೂ ಧರ್ಮದ ವಿಚಾರಕ್ಕೆ ಶ್ರೀ ಮಠವನ್ನು ಸುಪ್ರೀಂಕೋರ್ಟ್ ಎಂದು ನಂಬಿದ್ದೇವೆ ಎಂದರು.