ಹಾಸನ:ಜನಸಾಮಾನ್ಯರ ಆಡು ಭಾಷೆಯಾಗಿದ್ದ ಪ್ರಾಕೃತವನ್ನು ಕಲಿಯುವುದರಿಂದ ಇತಿಹಾಸ ಪ್ರಜ್ಞೆ ಮೂಡುವಲ್ಲಿ ಸಹಕಾರಿಯಾಗಲಿದೆ ಎಂದು ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಕುಲ ಸಚಿವ ರಾಜೇಂದ್ರ ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಕಾಲೇಜಿನಲ್ಲಿ ಇತಿಹಾಸ ವಿಭಾಗ ಹಾಗೂ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಾಕೃತ ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಅಶೋಕನ ಕಾಲದಲ್ಲಿ ರಾಜ್ಯ ಭಾಷೆಯಾಗಿದ್ದ ಪ್ರಾಕೃತ ಅತ್ಯಂತ ಮಹತ್ವದ ಭಾಷೆಯಾಗಿ ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡಿದೆ. ಕಾಳಿದಾಸನ ನಾಟಕದ ಬಹುತೇಕ ಮಹಿಳಾ ಪಾತ್ರಗಳು ಪ್ರಾಕೃತ ಭಾಷೆಯಲ್ಲಿಯೇ ಇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್, ಭಾರತದಲ್ಲಿ ಒಟ್ಟು 50 ಪ್ರಾಕೃತ ಕೇಂದ್ರಗಳಿದ್ದು, ಅದರಲ್ಲಿ ಹಾಸನದ ಕಲಾ ಕಾಲೇಜು ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕೇಂದ್ರವಾಗಿ ಹೊರಹೊಮ್ಮಿದೆ. ಪ್ರಾಕೃತ ಭಾಷೆಯನ್ನು ಕಲಿಯುವುದರಿಂದ ಭಾಷಾ ಸಾಹಿತ್ಯದಲ್ಲಿ ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ. ಉದ್ಯೋಗದಲ್ಲಿನ ಆದ್ಯತೆಗೂ ಇಂತಹ ಸರ್ಟಿಫಿಕೇಟ್ ಕೋರ್ಸ್‌ಗಳು ಹೆಚ್ಚು ಸಹಾಯಕವಾಗಿದೆ ಎಂದು ಹೇಳಿದರು.
ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳೆಲ್ಲರು ಅತೀ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದು, ಅದರಲ್ಲಿ ಕೆ.ಎಂ.ರಘು ಎಂಬ ವಿಶೇಷಚೇತನ ವಿದ್ಯಾರ್ಥಿಯು ಶೇ. 84 ಅಂಕಗಳಿಸಿರುವುದು ವಿಶೇಷವಾಗಿದೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್ ಪ್ರೊ.ಡಿ.ಎಸ್.ರಾಜು, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಸವೇಗೌಡ, ಸಹಾಯಕ ಪ್ರಾಧ್ಯಾಪಕ ಶೇಖರ್‌ನಾಯಕ್, ಪ್ರೊ. ಎಂ.ಪಿ.ಗೋಪಾಲ್ , ಡಾ. ಲಿಂಗಮೂರ್ತಿ ಇತರರು ಇದ್ದರು.