ಜಿಲ್ಲೆ

ಪ್ರಾಂಶುಪಾಲರಾಗಿ ಡಾ.ಎ.ಜೆ.ಕೃಷ್ಣಯ್ಯ ನೇಮಕ:ದಲಿತ ಸಂಘಟನೆಗಳಿಂದ ಅಭಿನಂದನೆ

ಹಾಸನ: ನಗರದ ಮಲೆನಾಡು ಇಂಜಿನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಡಾ.ಎ.ಜೆ. ಕೃಷ್ಣಯ್ಯ ಅವರನ್ನು ನೇಮಿಸಿದ ಎಂಸಿಇ ಶಿಕ್ಷಣ ಸಂಸ್ಥೆ ಅಧ್ಯಕ್ಷರಿಗೆ ಮತ್ತು ನಿರ್ದೇಶಕರಿಗೆ ಧನ್ಯವಾದ ತಿಳಿಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ್ ತಿಳಿಸಿದರು.
ಮಲೆನಾಡು ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗಿ 64 ವರ್ಷ ಕಳೆದಿದ್ದು, ಇದು ನಾಡಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಪ್ರತಿಷ್ಠಿತ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಹುದ್ದೆಗೆ ಇದೇ ಮೊದಲ ಬಾರಿಗೆ ಅರ್ಹತೆ ಆಧಾರದ ಮೇಲೆ ದಲಿತ ಸಮುದಾಯಕ್ಕೆ ಸೇರಿದ ಪ್ರಾಧ್ಯಾಪಕರಾದ ಡಾ.ಎ.ಜೆ.ಕೃಷ್ಣಯ್ಯ ಅವರನ್ನು ನೇಮಿಸಿದ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಹಾಗೂ ಕಾರ್ಯದರ್ಶಿ ಆರ್.ಟಿ. ದೇವೇಗೌಡರು ಮತ್ತು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕೃತಜ್ಞತೆ ಅರ್ಪಿಸಿದರು.
ಈ ಮೊದಲು ಜೇಷ್ಠತೆಯಲ್ಲಿ ಡಾ.ಎ.ಜೆ.ಕೃಷ್ಣಯ್ಯ ಅವರಿಗಿಂತ ಕಿರಿಯರಾದ ಡಾ.ಪ್ರದೀಪ್ ಅವರಿಗೆ ಆಡಳಿತ ಮಂಡಳಿ ಪ್ರಾಂಶುಪಾಲ ಹುದ್ದೆ ನೀಡಿತ್ತು. ಜೇಷ್ಠತೆಯ ಆಧಾರದ ಮೇಲೆ ಡಾ.ಎ.ಜೆ.ಕೃಷ್ಣಯ್ಯ ಅವರಿಗೆ ಪ್ರಾಂಶುಪಾಲ ಹುದ್ದೆ ನೀಡುವಂತೆ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಸಮನ್ವಯ ಸಮಿತಿ ನಿರಂತರವಾಗಿ ಆಡಳಿತ ಮಂಡಳಿಯನ್ನು ಒತ್ತಾಯಿಸಿತ್ತು. ದಲಿತ ಸಂಘಟನೆಗಳ ಒತ್ತಾಯ ಮತ್ತು ಸರ್ಕಾರ ನಿರ್ದೇಶನದ ಮೇರೆಗೆ ಆಡಳಿತ ಮಂಡಳಿಯು ಡಾ.ಎ.ಜೆ. ಕೃಷ್ಣಯ್ಯ ಅವರಿಗೆ ಪ್ರಾಂಶುಪಾಲ ಹುದ್ದೆಗೆ ನೇಮಕ ಮಾಡಿದೆ ಎಂದು ಹೇಳಿದರು.
ಆರ್‌ಪಿಐ ಪಕ್ಷದ ರಾಜ್ಯಾಧ್ಯಕ್ಷ ಸತೀಶ್ ಮಾತನಾಡಿ, ಸುದೀರ್ಘ ಅವಧಿಗೆ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿ.ಹಾರನಹಳ್ಳಿ ರಾಮಸ್ವಾಮಿ ಅವರು ಗಾಂಧಿವಾದಿಯಾಗಿದ್ದು, ದಲಿತ ಸಮುದಾಯದ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಅವರ ಆದರ್ಶವನ್ನೇ ಈಗಿನ ಅಧ್ಯಕ್ಷರು ಮತ್ತು ಅವರ ಪುತ್ರರಾದ ಅಶೋಕ್ ಹಾರನಹಳ್ಳಿ ಅವರು ಮೈಗೂಡಿಸಿಕೊಂಡಿರುತ್ತಾರೆ. ಇವರ ಅವಧಿಯಲ್ಲೇ ಕಾಲೇಜಿಗೆ ಬ್ಯಾಕ್‌ಲಾಗ್ ಮತ್ತು ನೇರ ನೇಮಕಾತಿ ಮುಖಾಂತರ ಸುಮಾರು 60 ರಿಂದ 70 ಜನ ದಲಿತ ಸಮುದಾಯಕ್ಕೆ ಸೇರಿದ ನೌಕರರನ್ನು ನೇಮಕ ಮಾಡಿದ್ದಾರೆ. ಇದಕ್ಕಾಗಿಯೂ ಕೂಡ ಇವರನ್ನು ದಲಿತ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ, ಪರಿಶಿಷ್ಟ ಜಾತಿ ಮತ್ತು ವರ್ಗದ ಅಧಿಕಾರಿಗಳ ಸಂಘದ ನಿರ್ದೇಶಕ ಜಯದೇವಯ್ಯ, ನಿರ್ದೇಶಕ ಲಕ್ಷ್ಮಣಯ್ಯ, ಉಪಾಧ್ಯಕ್ಷ ಕಾಡಯ್ಯ ಇತರರು ಉಪಸ್ಥಿತರಿದ್ದರು.