ಜಿಲ್ಲೆ

ಪ್ರಾಂತ ರೈತ ಸಂಘ ಪ್ರತಿಭಟನೆ

ಮದ್ದೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಮುಖಂಡ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರಿಗೆ ತಕ್ಷಣ ಭೂಮಿ ಮಂಜೂರು ಮಾಡಬೇಕು. ಹಳೆಯ ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡಬೇಕು. ಬೆಳಕು ಯೋಜನೆಯಲ್ಲಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಬೇಕು. ಸರ್ಕಾರದಿಂದ ಸಾಲ ಮನ್ನವಾಗಿರುವ ರೈತರಿಗೆ ಪ್ರಮಾಣ ಪತ್ರ ನೀಡಬೇಕು. ಎಲ್ಲ ರೈತರಿಗೆ ಹೊಸ ಸಾಲ ವಿತರಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಸೊಳ್ಳೆಪುರ ಗ್ರಾಮದಲ್ಲಿ ಮುಚ್ಚಿರುವ ಸಾರ್ವಜನಿಕ ರಸ್ತೆಯನ್ನು ತೆರವುಗೊಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಯರಗನಹಳ್ಳಿ ಗ್ರಾಮದ ಪರಿಶಿಷ್ಟ ಜನಾಂಗಕ್ಕೆ ಸಾರ್ವಜನಿಕ ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡಬೇಕು. ಬನ್ನಳ್ಳಿ ಗ್ರಾಮದ ಸಾರ್ವಜನಿಕ ಸ್ಮಶಾನ ಅಭಿವೃದ್ಧಿಪಡಿಸಿ ರಕ್ಷಿಸಬೇಕು ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಮಾತನಾಡಿ, ಆತಗೂರು ಹೋಬಳಿ, ಆಲಂಶೆಟ್ಟಹಳ್ಳಿ ಗ್ರಾಮದಲ್ಲಿ ಡಿಬಿಎಲ್ ಕಂಪನಿ ಅವೈಜ್ಞಾನಿಕವಾಗಿ ಮಣ್ಣು ತೆಗೆದ ಕಾರಣ ಪ್ರಾಣ ಕಳೆದುಕೊಂಡಿರುವ ಇಬ್ಬರು ಪರಿಶಿಷ್ಟ ಜಾತಿ ಮಹಿಳೆಯರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ಉದ್ಯೋಗ ಖಾತ್ರಿ ಕೆಲಸಗಾರರಿಗೆ ಕೂಲಿಯನ್ನು 600 ರೂಪಾಯಿಗೆ ಹೆಚ್ಚಿಸುವುದರೊಂದಿಗೆ 200 ದಿನಗಳ ಕೆಲಸ ನೀಡಬೇಕು ಎಂದು ಕೋರಿದರು.

ನಂತರ ಕಾರ್ಯಕರ್ತರು ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಸಂಘದ ರಾಜ್ಯ ಸಹ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್, ತಾಲೂಕು ಘಟಕದ ಅಧ್ಯಕ್ಷ ಎಸ್.ವಿಶ್ವನಾಥ್, ತಾಲೂಕು ಕಾರ್ಯದರ್ಶಿ ಕೆ.ಆರ್.ಸಿದ್ದೇಗೌಡ, ಮುಖಂಡರಾದ ಮಹದೇವಸ್ವಾಮಿ, ರಾಮದಾಸು, ಎಸ್.ಪಿ.ಬೋರಯ್ಯ, ತಾಯಮ್ಮ, ಸಣ್ಣಮ್ಮ, ಪ್ರೇಮಾ, ಪುಟ್ಟಗೌರಮ್ಮ, ವೆಂಕಟೇಶ, ದಾನಪ್ಪ, ಈರೇಗೌಡ, ರಾಮಲಿಂಗಯ್ಯ, ಉಮೇಶ, ಎಸ್.ಜವರೇಗೌಡ, ಶಿವು, ರಾಮಣ್ಣ, ಸೋಮನಹಳ್ಳಿ ರಾಜಣ್ಣ, ಚೊಟ್ಟನಹಳ್ಳಿ ನಾರಾಯಣ ಇದ್ದರು.