ಜಿಲ್ಲೆ

ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಮದ್ದೂರು: ಹಲವು ತಿಂಗಳಿಂದ ಬಾಕಿ ಉಳಿದಿರುವ ಮಾಸಾಶನವನ್ನು ನೀಡಲು ಆಗ್ರಹಿಸಿ, ಸಮರ್ಪಕ ಮಾಸಾಶನ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಬೆಸಗರಹಳ್ಳಿ ವಲಯ ಸಮಿತಿ ವತಿಯಿಂದ ಬೆಸಗರಹಳ್ಳಿ ನಾಡಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.


ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ತಾಲೂಕು ಕಾರ್ಯದರ್ಶಿ ಟಿ.ಪಿ.ಅರುಣ್‌ಕುಮಾರ್ ಮಾತನಾಡಿ, ಬೆಸಗರಹಳ್ಳಿ ನಾಡಕಚೇರಿ ವ್ಯಾಪ್ತಿಯ ಸಾವಿರಾರು ವೃದ್ಧರು, ಅಂಗವಿಕಲರು, ವಿಧವೆಯರು ಹಾಗೂ ಅಸಕ್ತರಿಗೆ ಕಳೆದ 6-7 ತಿಂಗಳಿಂದ ಮಾಸಾಶನ ಬಾರದೆ ಬದುಕು ನಡೆಸುವುದೇ ದುಸ್ತರವಾಗಿದೆ ಎಂದರು.


ಮಾತ್ರೆ, ಔಷಧ, ದಿನಬಳಕೆ ವಸ್ತುಗಳನ್ನು ಕೊಂಡುಕೊಳ್ಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮಾಸಾಶನವನ್ನೇ ನಂಬಿ ಕುಳಿತವರ ಸ್ಥಿತಿ ಹೈರಾಣಾಗಿದೆ. ಇತ್ತ ಮಾತ್ರೆಗೂ ಕಾಸಿಲ್ಲ, ಅತ್ತ ತರಕಾರಿ ಸೊಪ್ಪಿಗೂ ಕಾಸಿಲ್ಲದಂತೆ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಲಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಮಾಸಶನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.


ಮುಖಂಡ ಶ್ರೀನಿವಾಸ್ ಮಾತನಾಡಿ, ಅಶಕ್ತರು, ವೃದ್ಧರು, ವಿಧವೆಯರು, ಅಂಗವಿಕಲರು ಪೆನ್ಶನ್ ಹಣಕ್ಕಾಗಿ ಪಾಸ್‌ಬುಕ್ ಹಿಡಿದುಕೊಂಡು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದುನಿಂತು ಕೊನೆಗೆ ಪೆನ್ಶನ್ ಬಾರದೆ ನಿರಾಸೆಯಿಂದ ಹಿಂತಿರುಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿ, ಮೂರು ನಾಲ್ಕು ದಿನದಲ್ಲಿ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.


ರಮಣ ಮಹರ್ಷಿ ಅಂಧರ ಪರಿಷತ್‌ನ ಸಂಯೋಜಕಿ ಜಯಂತಿ ಹಿರೇಮಠ್, ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ಎ. ಮಧುಕುಮಾರ್, ಕೂಲಿಕಾರರ ಸಂಘದ ಮುಖಂಡರಾದ ಕೀಳಘಟ್ಟ ಶಾಂತಮ್ಮ, ರಾಜು, ಮಧುಕುಮಾರ, ಚಿಕ್ಕತಾಯಮ್ಮ, ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ವೆಂಕಟೇಶ್, ಶಿವಲಿಂಗಯ್ಯ, ಪ್ರಭುಲಿಂಗ, ಮುಖಂಡರಾದ ಜಯರಾಮು, ದುಂಡಮ್ಮ, ಜಯಮ್ಮ, ಚಂದ್ರಮ್ಮ, ಹೇಮಾವತಿ, ಕೋಣಸಾಲೆ ಅನಂತ, ರಮ್ಯ ಸೇರಿದಂತೆ ಇತರರಿದ್ದರು.