ಜಿಲ್ಲೆ

ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಮದ್ದೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕು ಘಟಕದ ವತಿಯಿಂದ ಮಂಗಳವಾರ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಗಂಜಿ ಕುಡಿಯುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.


ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಹನುಮೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದೆ. ಭರವಸೆಯಂತೆ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡಲು ಮುಂದಾಗಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರದಲ್ಲಿ ಸೇಡಿನ ರಾಜಕಾರಣ ಮಾಡುತ್ತಿದ್ದು, ಬಡವರ ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕುವ ಕೆಲಸ ಮಾಡುತ್ತಿದೆ ಎಂದು ವಿರುದ್ಧ ಕಿಡಿಕಾರಿದರು.


ಕೇಂದ್ರ ಸರ್ಕಾರ ಬಡವರಿಗೆ ದಕ್ಕಬೇಕಾದ ಯೋಜನೆಗಳಿಗೆ ಅಡ್ಡಗಾಲು ಹಾಕಿದರೆ, ರಾಜ್ಯದಲ್ಲಿ ಬಿಜೆಪಿ ನಿರ್ಮೂಲನೆ ಮಾಡಿದಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ತಾಲೂಕು ಕಚೇರಿಯ ಗ್ರೇಡ್ ಟು-2 ತಹಸೀಲ್ದಾರ್ ಸೋಮಶೇಖರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಕಳುಹಿಸಿಕೊಡಲಾಯಿತು.


ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ತಾಲೂಕು ಕಾರ್ಯದರ್ಶಿ ಟಿ.ಪಿ.ಅರುಣ್ ಕುಮಾರ, ಮುಖಂಡರಾದ ಶಾಂತಮ್ಮ, ನಾಗಮ್ಮ, ಶಿವರಾಜು, ವೈ.ಕೆ. ಗೋಪಾಲಸ್ವಾಮಿ, ಆಲಂ ಶೆಟ್ಟಳ್ಳಿ ಸ್ವಾಮಿ, ಈರೇಗೌಡ, ಜಯಮ್ಮ, ಚಂದ್ರಮ್ಮ, ಪ್ರಕಾಶ, ದೇವರಾಜು, ಸುಧಾಮಣಿ, ಪ್ರಶಾಂತ, ಪುಟ್ಟತಾಯಮ್ಮ, ಜಯಲಕ್ಷ್ಮಮ್ಮ ಬಸವಲಿಂಗಮ್ಮ ಇದ್ದರು.