ಜಿಲ್ಲೆ

ಪ್ರಸ್ತುತ ದಿನಗಳಲ್ಲಿ ವ್ಯಕ್ತಿತ್ವ ರೂಪಿಸುವ ಶಿಕ್ಷಣದ ಅಗತ್ಯವಿದೆ; ಪ್ರಾಚಾರ್ಯ ಪ್ರೊ.ಸಿದ್ದು ಯಾಪಲಪರ್ವಿ ಹೇಳಿಕೆ

ಗಂಗಾವತಿ: ಶಿಕ್ಷಕರಿಗೆ ಆರ್ಥಿಕ ಭದ್ರತೆ ಒದಗಿಸಿದಾಗ ಶೈಕ್ಷಣಿಕ ಬೆಳವಣಿಗೆ ನಿರೀಕ್ಷಿಸಬಹುದಾಗಿದ್ದು, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಬಹುದಾಗಿದೆ ಎಂದು ಗದಗ ಕೆವಿಎಸ್‌ಆರ್ ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರೊ.ಸಿದ್ದುಯಾಪಲಪರ್ವಿ ಹೇಳಿದರು.

ನಗರದ ಐಎಂಎ ಹಾಲ್‌ನಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ 2ನೇ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸಂಗೀತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಗುರು, ಶಿಷ್ಯನ ಸಂಬಂಧ ಉಳಿದಿದ್ದು, ಮಕ್ಕಳ ಮಾನಸಿಕತೆ ಅನುಗುಣ ಬೋಧನೆ ಸಾಮರ್ಥ್ಯ ಅಳವಡಿಸಿಕೊಳ್ಳಬೇಕಿದೆ. ನಿರ್ಭಯ, ನಿರಾಕರಣೆ ಮತ್ತು ನಿರ್ಲಿಪ್ತತೆ ಮನೋಭಾವನೆ ಯಶಸ್ಸಿನ ಗುಟ್ಟಾಗಿದ್ದು, ವ್ಯಕ್ತಿತ್ವ ರೂಪಿಸುವ ಶಿಕ್ಷಣದ ಅಗತ್ಯವಿದೆ ಎಂದರು.

ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ರಾಜಶೇಖರ್ ಮಾತನಾಡಿ, ಕರೊನಾ ಮುಂಜಾಗ್ರತೆ ಕ್ರಮಗಳಿಂದ ಶೈಕ್ಷಣಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದ್ದು, ಕಲಿಕಾ ಸಾಮರ್ಥ್ಯ ಕಳೆದುಕೊಂಡ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕಿದೆ ಎಂದರು. ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಹೊಸದಾಗಿ ನೇಮಕಗೊಂಡ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಕರೊನಾ ನಂತರದಲ್ಲಿ ಶಿಕ್ಷಣದ ಸಾಧಕ, ಬಾಧಕಗಳ ಬಗ್ಗೆ ಚರ್ಚಿಸಲಾಯಿತು.

ನಿವೃತ್ತ ಉಪನಿರ್ದೇಶಕ ಎಲ್.ಜಿ.ರಾಟಿಮನಿ, ಪ್ರಾಚಾರ್ಯರ ಸಂಘದ ಉಪಾಧ್ಯಕ್ಷ ಬಸವರಾಜ, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ್, ಪದಾಧಿಕಾರಿಗಳಾದ ಡಿ.ಬಿ.ಗಡೇದ್, ಇಮಾಮ್ ಹುಸೇನ್, ಪತ್ರೆಪ್ಪ, ಕೀರಪ್ಪ ವಜ್ರಬಂಡಿ, ಮಹಾಬಳೇಶ್ವರ, ಮಹೆಬೂಬ್‌ಅಲಿ ಇತರರಿದ್ದರು. ಉಪನ್ಯಾಸಕ ರಾಘವೇಂದ್ರ ನಿರ್ವಹಿಸಿದರು.