ಜಿಲ್ಲೆ

ಪ್ರಸೂತಿ, ಸ್ತ್ರೀರೋಗ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ

ಚಿತ್ರದುರ್ಗ: ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆಗಳಾಗಲಿ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಪ್ರಥಮ ಬಾರಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಸಹಯೋಗದಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಐದನೇ ಯುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಎರಡು ದಿನಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ವೈದ್ಯಕೀಯ ಸಂಸ್ಥೆ ಅಗತ್ಯ ಸಹಕಾರ ನೀಡಲಿದೆ ಎಂದರು.

ಶ್ರೀಮಠದ ಆಡಳಿತ ಮಂಡಳಿ ಮತ್ತೊಬ್ಬ ಸದಸ್ಯ ಡಾ.ಪಿ.ಎಸ್. ಶಂಕರ್ ಮಾತನಾಡಿ, ಈ ವಿಭಾಗದಲ್ಲಿ ಹೆಚ್ಚು, ಹೆಚ್ಚು ಆವಿಷ್ಕಾರಗಳಾಗಬೇಕಿದೆ. ಇದಕ್ಕೆ ಯುವ ವೈದ್ಯರು ಸ್ಪಂದಿಸಿ ಹೆಜ್ಜೆ ಇಡಬೇಕಿದೆ ಎಂದು ಆಶಿಸಿದರು.

ಸಮ್ಮೇಳನದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಆಗಿರುವ ಆಧುನಿಕ ಹೊಸ ಬೆಳವಣಿಗೆಗಳನ್ನು ಕುರಿತು ತಜ್ಞರು ಚಿಂತನೆ ನಡೆಸಲಿದ್ದಾರೆ. ತಾಯಿ, ಶಿಶು ಮರಣ ತಗ್ಗಿಸುವುದು, ಗರ್ಭಕಂಠದ ಕ್ಯಾನ್ಸರ್ ತಡೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು.

ಬಸವೇಶ್ವರ ಆಸ್ಪತ್ರೆ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ಲತಾ, ಡಾ.ಗೀತಾ, ಕಾಲೇಜಿನ ಡೀನ್ ಡಾ. ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್. ರಾಜೇಶ್, ಕರ್ನಾಟಕ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಹಿಂದಿನ ಅಧ್ಯಕ್ಷೆ ಡಾ. ಭಾರತಿ ರಾಜಶೇಖರ್, ಅಧ್ಯಕ್ಷ ಡಾ. ದುರ್ಗಾದಾಸ್, ಕಾರ್ಯದರ್ಶಿ ಡಾ. ರಾಜಶ್ರೀ ಪಲ್ಲುಡಿ ಮತ್ತಿತರರು ಇದ್ದರು.

ಸಮ್ಮೇಳನದ ಮೊದಲ ದಿನ ಹಿಸ್ಟೆರೋಸ್ಕೋಪಿ ಕುರಿತಂತೆ ಕಾರ್ಯಾಗಾರ ನಡೆಯಿತು. ಭಾನುವಾರ ಪೆರಿನೆಟಾಲಜಿ ಕುರಿತ ಕಾರ್ಯಾಗಾರವಿದೆ. ಸಮ್ಮೇಳನದಲ್ಲಿ 250ಕ್ಕೂ ಹೆಚ್ಚು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, 210 ಸ್ನಾತಕೋತ್ತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದಾರೆ. ಡಾ. ಲಕ್ಷ್ಮೀಪ್ರಶಾಂತ್ ಹಾಗೂ ಡಾ. ರಶ್ಮಿ ನಿರೂಪಿಸಿದರು.