ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸಜ್ಜಲಗುಡ್ಡದಲ್ಲಿ ಆ.12 ಮತ್ತು 13ರಂದು ಶರಣಮ್ಮ ತಾಯಿ ಉಚಿತ ಪ್ರಸಾದ ನಿಲಯದ ಅಮೃತ ಮಹೋತ್ಸವ ಮತ್ತು ಶರಣಮ್ಮ ತಾಯಿಯವರ 43ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಿಲಯದ ಹಳೇ ವಿದ್ಯಾರ್ಥಿಗಳ ಬಳಗದ ಸದಸ್ಯ ಅಣ್ಣಪ್ಪ ಮೇಟಿಗೌಡ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಎರಡು ದಿನಗಳ ಕಾಲ ಶರಣಮ್ಮ ತಾಯಿ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಗ್ರಂಥಗಳ ಲೋಕಾರ್ಪಣೆ, ಹಳೇ ವಿದ್ಯಾರ್ಥಿಗಳಿಗೆ ಗುರುರಕ್ಷೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಆ.12ರ ಬೆಳಗ್ಗೆ 11.30ಕ್ಕೆ ನೀಲಕಂಠರಾಯ ತಾತನವರಿಂದ ಧ್ವಜಾರೋಹಣ ನೆರವೇರಲಿದ್ದು, ಶರಣಮ್ಮ ತಾಯಿಯ ರಜತ ಮೂರ್ತಿಯ ಅನಾವರಣಗೊಳಿಸಲಾಗುತ್ತಿದ್ದು, ವಿವಿಧ ಮಠಾಧೀಶರು ನೇತೃತ್ವ ವಹಿಸಲಿದ್ದಾರೆ.
ಮಧ್ಯಾಹ್ನ 3ಕ್ಕೆ ಗ್ರಂಥಗಳ ಲೋಕಾರ್ಪಣೆ ನಡೆಯಲಿದ್ದು, ಉಜ್ಜಿನಿ ಜಗದ್ಗುರು ಡಾ.ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಹೊಸಪೇಟೆಯ ಅಂಜಲಿ ಭರತನಾಟ್ಯ ಕಲಾಕೇಂದ್ರದ ಕಲಾವಿದರಿಂದ ನೃತ್ಯ ಪ್ರದರ್ಶನ, ಕಲಬುರಗಿಯ ವಿನೋದ ರತ್ನಾಕರ, ಗುಂಡಣ್ಣ ಡಿಗ್ಗಿಯಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಆ.13ರ ಬೆಳಗ್ಗೆ 9ಕ್ಕೆ ಗುಡದೂರು ಮತ್ತು ಸಜ್ಜಲಗುಡ್ಡದ ಉಭಯ ತಾತನವರಿಗೆ ತುಲಾಭಾರ ನೆರವೇರಿಸಲಾಗುತ್ತಿದ್ದು, ಮಾಧ್ಯಾಹ್ನ 3ಕ್ಕೆ ಗುರುರಕ್ಷೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಗಂಗಾವತಿಯ ನರಸಿಂಹ ಜೋಶಿಯಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಣ್ಣಪ್ಪ ಮೇಟಿಗೌಡ ತಿಳಿಸಿದರು.
ವಸತಿ ನಿಲಯದ ಹಳೇ ವಿದ್ಯಾರ್ಥಿ ರಾಮಲಿಂಗಪ್ಪ ಚಂದನಕೇರಿ ಮಾತನಾಡಿ, 1947ರಲ್ಲಿ ಪ್ರಸಾದ ನಿಲಯ ಆರಂಭವಾಗಿದ್ದು, ವಸತಿನಿಲಯದಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಆಶ್ರಯ ಪಡೆದು ವಿದ್ಯಾಭ್ಯಾಸ ಮುಗಿಸಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿಲಯದ ಅಮೃತ ಮಹೋತ್ಸವದಲ್ಲಿ ಹಳೇ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಹಳೇ ವಿದ್ಯಾರ್ಥಿ ಬಳಗದ ಸದಸ್ಯರಾದ ಎಸ್.ಬಿ.ಹಿರೇಮಠ, ಗುರುಸಂಗಪ್ಪ, ಮರೇಗೌಡ ಪಾಟೀಲ್, ನವೀನ್, ಶೇಖರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.