ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಪ್ರಸನ್ನ ಗಣಪತಿ ರಸ್ತೆಯಲ್ಲಿ ಅಂಗಡಿ ಹಾಕಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ ಶುಕ್ರವಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕಣಗಾಲ್ ಮೂರ್ತಿ ಅವರು ಮಾತನಾಡಿ, ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳು ಅಂಗಡಿ ಇಟ್ಟು ಅಲ್ಪ ಆದಾಯ ಮಾಡಿಕೊಳ್ಳುತ್ತಾರೆ. ಆದರೆ ಜನದಟ್ಟಣೆ ನಿಯಂತ್ರಣ ನೆಪದಲ್ಲಿ ಜಿಲ್ಲಾಡಳಿತ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಹಾಸನಾಂಬ ಜಾತ್ರೆ ಹತ್ತಾರು ವರ್ಷಗಳಿಂದ ಆಚರಣೆಯಲ್ಲಿದೆ. ಈ ಹಿಂದೆ ಇಲ್ಲದ ಅಡೆತಡೆ ಈಗ ಯಾಕೆ ಎಂದು ಪ್ರಶ್ನಿಸಿದರು. ವರ್ಷಗಳು ಉರುಳಿದಂತೆ ಹಾಸನಾಂಬ ಹಣಕಾಸು ತಾಣವಾಗಿ ಬದಲಾಗುತ್ತಿದೆ. ಸ್ಥಳೀಯ ವ್ಯಾಪಾರಿಗಳು, ರೈತರು ಇಲ್ಲದೆ ಜಾತ್ರೆ ಮಾಡಲು ಸಾಧ್ಯವಿಲ್ಲ. ಜಿಲ್ಲಾಡಳಿತ ಅದನ್ನು ಅರ್ಥ ಮಾಡಿಕೊಳ್ಳಬೇಕು. ದೇವಾಲಯಕ್ಕೆ ಅಪಾರ ಪ್ರಮಾಣದಲ್ಲಿ ದೀಪದ ಎಣ್ಣೆ ಕೊಟ್ಟಿದ್ದೇವೆ. ಅಧಿಕಾರಿಗಳಿಗೆ ಇರುವಷ್ಟೇ ಭಕ್ತಿ ನಮಗೂ ಇದೆ. ಆದ್ದರಿಂದ ವ್ಯಾಪಾರಕ್ಕೆ ಅಡ್ಡಿಯಾಗಬೇಡಿ ಎಂದರು.
ವ್ಯಾಪಾರಿಗಳಾದ ಶ್ರೀನಿವಾಸ್, ನಂದೀಶ್ ಹಾವೇರಿ, ಕೇಶವಮೂರ್ತಿ, ನವೀನ್, ಧೀರಜ್ ಕುಮಾರ್, ಬಸವರಾಜು ಇತರರು ಇದ್ದರು.