ಜಿಲ್ಲೆ

ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು: ವಿದ್ಯಾರ್ಥಿಗಳಿಗೆ ಎಂಸಿಎಫ್ ವಿಜ್ಞಾನಿ ದಿವ್ಯಾ ಸುಬ್ರಮಣ್ಯಂ ಕಿವಿಮಾತು

Hassan - Ramesh H R

ಹಾಸನ: ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಉತ್ತಮ ಭವಿಷ್ಯದ ಸುಸ್ಥಿರತೆ ಹಾಗೂ ಅಭಿವೃದ್ಧಿಗಾಗಿ ವಿಜ್ಞಾನದ ಬಳಕೆಯಾಗಬೇಕು ಎಂದು ಎಂಸಿಎಫ್ ವಿಜ್ಞಾನಿ ದಿವ್ಯಾ ಸುಬ್ರಮಣ್ಯಂ ಅವರು ಹೇಳಿದರು.

ನಗರದ ವಿಜಯಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ‘ಸೈಂಟಿಯಾ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಹೊಂದಿದರೆ ಮುಂದೆ ವಿಜ್ಞಾನ, ವೈದ್ಯಕೀಯ, ಉದ್ದಿಮೆ, ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆಗೈದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹಾಗೂ ಪ್ರಸ್ತುತ ಹವಾಮಾನ ವೈಪರಿತ್ಯದ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸಬಹುದೆಂದು ಹೇಳಿದರು.

ವಿಜ್ಞಾನ ವಸ್ತು ಪ್ರದರ್ಶನಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ ಶಿಕ್ಷಕರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ ದೇಶವು ನಡೆಸಿದ ಚಂದ್ರಯಾನ, ಮಂಗಳಯಾನ ಹಾಗೂ ಆದಿತ್ಯಯಾನ ಮೊದಲಾದ ಬಾಹ್ಯಾಕಾಶ ಸಾಧನೆಗಳತ್ತ ಒಳನೋಟ ಚೆಲ್ಲಿದರು. ವಿದ್ಯಾರ್ಥಿಗಳು ತಮ್ಮನ್ನು ವಿವಿಧ ಬಗೆಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎದುರಾಗುವ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಸಾಧಕರಾಗುವಂತೆ ಪ್ರೇರಣೆ ನೀಡಿದರು.

ಶಾಲಾ ಶೈಕ್ಷಣಿಕ ಮುಖ್ಯಸ್ಥರಾದ ಡಾ.ಎಸ್.ಶ್ರೀ ಲಕ್ಷ್ಮೀ ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹೊಸ ಅಧ್ಯಯನ, ಪ್ರಯೋಗಶೀಲತೆ, ಸತ್ಯಾಸತ್ಯತೆಗಳ ಅರಿವು, ಚಿಂತನಾಶೀಲತೆ ಮೊದಲಾದವುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಲ್ಲಿ ವಿಜ್ಞಾನದ ಕಲಿಕೆಯು ಸಹಕಾರಿಯಾಗಿದೆ. ಪ್ರಸ್ತುತ ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಆವಿಷ್ಕಾರಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಶಾಲಾ ಶೈಕ್ಷಣಿಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಅವರು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಡಿ.ಪಿ.ಚೇತನ್ ಎಲ್ಲರಿಗೂ ಸುಸ್ಥಿರ ಜೀವನದ ಕುರಿತ ಪ್ರತಿಜ್ಞಾ ವಿಧಿಯನ್ನು ಬೋಧಿಸಿದನು. ಪ್ರತಿಜ್ಞಾ ವಿಧಿಯು ಮೂಲಭೂತ ಅಗತ್ಯತೆಗಳಿಗೆ ತಕ್ಕಂತೆ ಇಂಧನ ಹಾಗೂ ಅಗತ್ಯ ವಸ್ತುಗಳ ಬಳಕೆ, ಪುನರ್ಬಳಕೆ, ಮರುಬಳಕೆ, ಪ್ಲಾಸ್ಟಿಕ್ ಹಾಗೂ ಪರಿಸರ ಮಾರಕ ವಸ್ತುಗಳ ಬಳಕೆಯನ್ನು ನಿಬರ್ಂಧಿಸುವುದು ಮೊದಲಾದ ಅಂಶಗಳನ್ನು ಒಳಗೊಂಡಿತ್ತು.

ಒಂದರಿಂದ ಹತ್ತನೆಯ ತರಗತಿಯ ಒಟ್ಟು 655 ವಿದ್ಯಾರ್ಥಿಗಳು, 467 ವಿವಿಧ ಬಗೆಯ ವಿಜ್ಞಾನ ಮಾದರಿಗಳನ್ನು 46 ವಿಭಿನ್ನ ವಿಷಯಗಳ ಮೇಲೆ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಗೀತಾ ಕಿರಣ್, ವಿಜಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈ.ಎನ್.ಸುಬ್ಬಸ್ವಾಮಿ, ಪ್ರಾಂಶುಪಾಲ ಕೆ.ಎಸ್.ನಂದೀಶ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.