ಚಾಮರಾಜನಗರ : ಯಾವುದೇ ಪ್ರಶಸ್ತಿಗಳು ಉತ್ತಮ ಬರವಣಿಗೆಗೆ ಮಾನದಂಡವಲ್ಲ, ಬಹುಮಾನ ಸಣ್ಣ ಪ್ರೋತ್ಸಾಹವೇ ಹೊರತು ಪರಿಪೂರ್ಣ ಬರವಣಿಗೆಗೆ ಆದರ್ಶವಲ್ಲ ಎಂದು ಜಾನಪದ ವಿದ್ವಾಂಸ ಹಾಗೂ ಹಿರಿಯ ಸಾಹಿತಿ ಕೃಷ್ಣಮೂರ್ತಿ ಹನೂರು ಹೇಳಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಯುವ ಸಾಹಿತಿ ಪ್ರಕಾಶ್ ಪುಟ್ಟಪ್ಪ ಅವರ ’ಗಾಂಧಿ ಜೋಡಿನ ಮಳಿಗೆ’ ಮತ್ತು ’ಅಥೆನ್ಸಿನ ಪಾರಿವಾಳ’ ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡಿದರು. ಪ್ರಾಂತೀಯ ಭಾಷೆಯಲ್ಲಿ ಮಹಾಭಾರತವನ್ನು ಬರೆದ ಪಂಪ ದೇಶದ ಶ್ರೇಷ್ಠ ಕವಿಯಾಗಿದ್ದಾರೆ. ಅಂತಹ ಕವಿ ಬಂದ ಮೇಲೂ ಅಲ್ಲಮಪ್ರಭು ಅಂಥ ವಚನಕಾರರು ಸಿಗಲು ಸಾಧ್ಯವಿಲ್ಲ. ಕುವೆಂಪು ಅವರಿಗೆ ರಾಮಾಯಣ ದರ್ಶನಂ ಕೃತಿ ಜ್ಞಾನಪೀಠ ಪ್ರಶಸ್ತಿ ದೊರೆತರೂ, ಮಲೆಗಳಲ್ಲಿ ಮದುಮಗಳು ಸರ್ವ ಶ್ರೇಷ್ಠ ಮಹಾಕಾವ್ಯವಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯದ ನಡೆ ಬಹಳ ಅರ್ಥಪೂರ್ಣವಾಗಿದ್ದು, ಈ ನಾಡಿನ ಲೇಖಕರ ಬೆಳಕು ಎಂದಿಗೂ ಕೆಡುವುದಿಲ್ಲ. ಶ್ರೀನಿಜಗುಣ ಶಿವಯೋಗಿಗಳು ಹಾಗೂ ಶ್ರೀಮಂಟೇಸ್ವಾಮಿ ಅವರು ಹಚ್ಚಿದ ಅರಿವಿನ ಬೆಳಕು ಮುಂದುವರಿಯುತ್ತಿದೆ. ಬರಹಕ್ಕೆ ಅಂತ್ಯ, ಕೊನೇ, ಎಲ್ಲೆ ಎಂಬುದಿಲ್ಲ. ಅದು ಅಂತರಂಗದಲ್ಲಿ ನಿರಂತರವಾಗಿ ಪ್ರವಹಿಸುತ್ತಿದೆ. ಕಥೆ ತನ್ನಪಾಡಿಗೆ ತಾನೇ ಅರಳಬೇಕೆ ಅಥವಾ ಕಥೆಯನ್ನು ನಾವು ಬರೆಯಬೇಕೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಎಂದರು.
ಸಾಹಿತ್ಯ ಯಾವತ್ತೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ, ಅಗಾಧವಾದ ಜೀವನ ಪ್ರೇಮ ಹೇಳುವ ಮೂಲಕ ಮನುಷ್ಯನ ವಿಕಾಸಕ್ಕೆ ಕಾರಣವಾಗುತ್ತದೆ. ಬರವಣಿಗೆ ಶಕ್ತಿಗೆ ಎಂದಿಗೂ ಕೊನೆಯಿಲ್ಲ. ಈ ನಿಟ್ಟಿನಲ್ಲಿ ಪ್ರಕಾಶ್ ಪುಟ್ಟಪ್ಪ ಅವರು ನೆಲದ ಬೇರು, ಭಾಷೆ, ಅನುಭವದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆಯುತ್ತಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಹೇಳಿದರು.
ಸಾಹಿತಿ ಕುಸುಮಾ ಆಯರಹಳ್ಳಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಬದಲಾವಣೆಗೆ ಎಲ್ಲರೂ ಒಗ್ಗಿಕೊಳ್ಳಬೇಕಾಗಿದೆ. ಪೊನ್ನಾಚಿ ಎಂಬ ಗ್ರಾಮದಲ್ಲಿ ಸಾಕಷ್ಟು ಕಥೆಗಾರರು ಇರುವುದು ಅದರ ನೆಲದ ಗುಣ ಎಂದು ಹೇಳಬಹುದು. ಸಣ್ಣ ಕಥೆಗಳನ್ನು ಒಲಿಸಿಕೊಳ್ಳುವುದು ತುಂಬ ಕಷ್ಟವಿದೆ. ಪ್ರಕಾಶ್ ಪುಟ್ಟಪ್ಪ ಅವರ ಕಥೆಗಳಲ್ಲಿ ವೇಗವಿದ್ದರೂ, ಅಂತ್ಯ ಅತ್ಯಂತ ಅಚ್ಚುಕಟ್ಟಾಗಿದೆ ಎಂದರು. ಖ್ಯಾತ ವಿಮರ್ಶಕ ಹಾಗೂ ಸಾಹಿತಿ ಜಿ.ಪಿ.ಬಸವರಾಜು, ದೀನಬಂಧು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜಿ.ಎಸ್.ಜಯದೇವ್, ಅಮೂಲ್ಯ ಪುಸ್ತಕ ಪ್ರಕಾಶನದ ಕೃಷ್ಣ ಚಂಗಡಿ, ಯುವ ಸಾಹಿತಿ ಪ್ರಕಾಶ್ ಪುಟ್ಟಪ್ಪ, ಸ್ವಾಮಿ ಪೊನ್ನಾಚಿ, ಕೆ.ಶ್ರೀಧರ್ ಸಿರಿ ಇತರರು ಹಾಜರಿದ್ದರು.
ಜಿಲ್ಲೆ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತ ಬಂದಿದೆ. ವಿಶೇಷವಾಗಿ ಚಾಮರಾಜನಗರ ಅಸ್ಮಿತೆಯನ್ನು ಯುವ ತಲೆಮಾರಿನ ಕವಿಗಳು ಹಾಗೂ ಸಾಹಿತಿಗಳು ಚೆನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಗಾಂಧಿ ಜೋಡಿನ ಮಳಿಗೆ ಮತ್ತು ಅಥೆನ್ಸಿನ ಪಾರಿವಾಳ ಪೂರಕವಾಗಿದೆ.
ಮಹದೇವ ಶಂಕನಪುರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಾಮರಾಜನಗರ