ಜಿಲ್ಲೆ

ಪ್ರಶಸ್ತಿ ಪಡೆದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರ

ಗೌಡಪ್ಪ ಬನ್ನೆ ಬಂಕಾಪುರ

ತಾಲೂಕಿನ ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರವು ಈ ಹಿಂದೆ ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಸತತ ಮೂರು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದು ಜಿಲ್ಲೆಯಲ್ಲಿಯೇ ಉತ್ತಮ ಆರೋಗ್ಯ ಕೇಂದ್ರದ ಹಿರಿಮೆ ಹೊಂದಿತ್ತು. ಆದರೀಗ ಅಗತ್ಯ ವೈದ್ಯರಿಲ್ಲದೇ ಸಾರ್ವಜನಿಕರು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ವಣವಾಗಿದೆ.

30 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಬಂಕಾಪುರ ಪಟ್ಟಣ ಸೇರಿ ಸುತ್ತಲಿನ ಅನೇಕ ಹಳ್ಳಿಗಳ ಜನರು ಇದೇ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ನಿತ್ಯ ಕನಿಷ್ಠ 350ಕ್ಕೂ ಅಧಿಕ ಹೊರ ರೋಗಿಗಳು ವಿವಿಧ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದ ಕಾರಣ ಬಡ ಜನರಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ. ಅನಿವಾರ್ಯವಾಗಿ ದಿನಗಟ್ಟಲೇ ಕಾದು ಚಿಕಿತ್ಸೆ ಪಡೆಯುವಂತಾಗಿದೆ.

30 ಹಾಸಿಗೆಗಳ ಆಸ್ಪತ್ರೆಯಾಗಿರುವ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಟ್ಟು 39 ಹುದ್ದೆ ಮಂಜೂರಾಗಿವೆ. ಅದರಲ್ಲಿ ಕಚೇರಿ ಸಿಬ್ಬಂದಿ ಸೇರಿ 15 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, 24 ಹುದ್ದೆಗಳು ಖಾಲಿ ಇವೆ. ಸದ್ಯ ಆರೋಗ್ಯ ಕೇಂದ್ರದಲ್ಲಿ ಮೂವರು ವೈದ್ಯರಿದ್ದಾರೆ. ಅವರಲ್ಲಿ ಅರಿವಳಿಕೆ ತಜ್ಞ, ದಂತ ಆರೋಗ್ಯಾಧಿಕಾರಿ ಮಾತ್ರ ಸೇವೆಗೆ ಲಭ್ಯರಿದ್ದಾರೆ. ಸ್ತ್ರೀರೋಗ ತಜ್ಞರು ಶಿಗ್ಗಾಂವಿಯಲ್ಲೂ ಕಾರ್ಯ ನಿರ್ವಹಿಸುತ್ತಿರುವುದರಿಂದ ವಾರಕ್ಕೊಮ್ಮೆ ಬಂದು ಹೋಗುತ್ತಾರೆ. ಜತೆಗೆ ಆಯುಷ್ ವೈದ್ಯರೊಬ್ಬರು ಸೇವೆ ಸಲ್ಲಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ, ಜನರಲ್ ಮೆಡಿಸಿನ್, ಎಲುಬು ಕೀಲು, ಹೃದಯ, ನೇತ್ರ ಸೇರಿ ಮಹಿಳಾ ವೈದ್ಯರು ಕಾರ್ಯನಿರ್ವಹಿಸುತ್ತಿಲ್ಲ. 24ಗಿ7 ಹೆರಿಗೆ ಆಸ್ಪತ್ರೆಯಾಗಿರುವ ಇಲ್ಲಿ ಸಿಸೇರಿಯನ್ ವಿಭಾಗವಿಲ್ಲ. ನವಜಾತ ಶಿಶುಗಳಿಗೆ ಸೂಕ್ತ ಚಿಕಿತ್ಸೆ, ತೀವ್ರ ನಿಗಾ ಘಟಕ ವ್ಯವಸ್ಥೆ ಇಲ್ಲ. ಅಲ್ಲದೆ, ಸಂಜೆ 5ರಿಂದ ಬೆಳಗ್ಗೆ 10 ರವರೆಗೆ ವೈದ್ಯರ ಸೇವೆ ಲಭ್ಯವಿರುವುದಿಲ್ಲ. ಈ ಸಮಯದಲ್ಲಿ ಆಸ್ಪತ್ರೆಯಲ್ಲಿ ನರ್ಸ್ ಗಳು ಮಾತ್ರ ಇರುವುದರಿಂದ ಅಪಘಾತ ಸೇರಿ ಇತರ ಸೇವೆಗಳಿಗೆ ರೋಗಿಗಳು ಪರದಾಡುವಂತಾಗಿದೆ.

ವಿಶಾಲ ಜಾಗ ಹೊಂದಿರುವ ಆರೋಗ್ಯ ಕೇಂದ್ರದಲ್ಲಿ 14 ವಸತಿ ಗೃಹಗಳಿವೆ. ಆದರೆ, ಇಲ್ಲಿ ಸಿಬ್ಬಂದಿ ವಾಸವಿರುವುದಿಲ್ಲ. ಕಾರಣ ಎಲ್ಲ ವಸತಿ ಗೃಹಗಳು ಸಂಪೂರ್ಣ ಶಿಥಿಲಗೊಂಡಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ. ಈ ಬಗ್ಗೆ ಹಲವು ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರದ ಪ್ರಮುಖ ಪಟ್ಟಣವಾಗಿರುವ ಬಂಕಾಪುರ ಆಸ್ಪತ್ತೆಗೆ ವೈದ್ಯರಿಲ್ಲದ ಕಾರಣ ಜನರು ಪರದಾಡುವಂತಾಗಿದೆ. ಕೋವಿಡ್​ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ಶಕ್ತಿ ಇಲ್ಲ. ಸರ್ಕಾರಿ ಆಸ್ಪತ್ರೆಗಳೇ ಅವರಿಗೆ ಆಧಾರ. ಈ ಕುರಿತು ಈಗಾಗಲೇ ಆರೋಗ್ಯ ಸಚಿವರಿಗೂ ಪತ್ರ ಬರೆಯಲಾಗಿದೆ. ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಜತೆಗೆ ಸಿಬ್ಬಂದಿಗೆ ಹೊಸ ವಸತಿ ಗೃಹ ನಿರ್ವಿುಸಬೇಕು. ಈ ಮೂಲಕ ಜನರಿಗೆ ಸೂಕ್ತ ವೈದ್ಯಕೀಯ ಸೇವೆ ಅನುಕೂಲ ಮಾಡಿಕೊಡಬೇಕು.ಎ.ಕೆ. ಆದವಾನಿಮಠ, ನಿವೃತ್ತ ಶಿಕ್ಷಕರು, ಸಾಹಿತಿಗಳು ಬಂಕಾಪುರ
ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಕೊರತೆ ಸಮಸ್ಯೆ ಕುರಿತು ಪ್ರತಿ ವಾರ ನಡೆಯುವ ಮೀಟಿಂಗ್​ನಲ್ಲಿ ಚರ್ಚೆ ಮಾಡುತ್ತಿದ್ದೇನೆ. ಸಮಸ್ಯೆ ಬಗ್ಗೆ ಪ್ರಧಾನ ಕಾರ್ಯದರ್ಶಿ(ಪ್ರಿನ್ಸಿಪಲ್ ಸೆಕ್ರೆಟರಿ) ಮತ್ತು ಕಮಿಷನರ್​ಗೆ ವಿಷಯ ಗೊತ್ತಿದೆ. ಅವರು ನಮಗೆ ಎರಡು ವಾರ ಕಾಯುವಂತೆ ತಿಳಿಸಿದ್ದಾರೆ. ಸದ್ಯ ಕೌನ್ಸೆಲಿಂಗ್ ನಡೆಯುತ್ತಿದೆ. ಯಾರೂ ಬರಲಿಲ್ಲ ಅಂದರೆ ಹುದ್ದೆ ತುಂಬಿಕೊಳ್ಳಲು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಡಾ.ರಾಘವೇಂದ್ರಸ್ವಾಮಿ ಡಿಎಚ್​ಒ ಹಾವೇರಿ ಜಿಲ್ಲೆ