ಬೆಳಗಾವಿ: ಜಿಲ್ಲೆಯ ಸರ್ಕಾರಿ ಪಿಯು ಕಾಲೇಜ್‌ಗಳಿಗೀಗ ಶುಕ್ರದೆಸೆ ಕುದುರಿದೆ. ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಆದರೆ, ಕಲಿಕೆಗೆ ಪೂರಕವಾಗಿ ಮೂಲಸೌಲಭ್ಯ ಒದಗಿಸುವುದೇ ಸವಾಲಾಗಿದೆ.
ಕರೊನಾ ಇಳಿಮುಖವಾಗುತ್ತಿದ್ದಂತೆ ಮತ್ತೆ ಶಾಲಾ-ಕಾಲೇಜ್‌ಗಳು ಆರಂಭವಾದ ಬಳಿಕ ಸರ್ಕಾರಿ ಕಾಲೇಜ್‌ಗಳಿಗೆ ಬೇಡಿಕೆ ಹೆಚ್ಚಿದೆ. ಪ್ರವಾಹೋಪಾದಿಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಪ್ರವೇಶ ಪಡೆಯುತ್ತಿದ್ದಾರೆ. ಆದರೆ, ಪ್ರವೇಶ ಪಡೆದವರಿಗೆ ಸೌಲಭ್ಯ ಕಲ್ಪಿಸುವುದಾದರೂ ಹೇಗೆ ಎಂಬ ಚಿಂತೆ ಪ್ರಾಚಾರ್ಯರನ್ನು ಕಾಡತೊಡಗಿದೆ.
ಸರ್ಕಾರಿ ಕಾಲೇಜಿನತ್ತ ಚಿತ್ತ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 30 ಹಾಗೂ ಚಿಕ್ಕೋಡಿ ಜಿಲ್ಲೆಯಲ್ಲಿ 31 ಸರ್ಕಾರಿ ಪಿಯು ಕಾಲೇಜ್‌ಗಳಿವೆ. 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 73,291 (ಶೇ.100) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಪೈಕಿ ಹೆಚ್ಚಿನವರು ಸರ್ಕಾರಿ ಶಿಕ್ಷಣ ಸಂಸ್ಥೆಗಳತ್ತಲೇ ಮುಖಮಾಡಿದ್ದಾರೆ. ಕಳೆದ ವರ್ಷ ಪಿಯು ಪ್ರಥಮ ವರ್ಷಕ್ಕೆ ಖಾಸಗಿ ಕಾಲೇಜ್‌ನಲ್ಲಿ ಪ್ರವೇಶ ಪಡೆದಿದ್ದ ಹಲವು ವಿದ್ಯಾರ್ಥಿಗಳು ಈಗ ಸರ್ಕಾರಿ ಕಾಲೇಜ್ ಮೆಟ್ಟಿಲೇರಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡಿಕೆಗೆ ತೊಡಕುಂಟಾಗುತ್ತಿದೆ.
ವಿದ್ಯಾರ್ಥಿಗಳ ಪರದಾಟ: ಕೋವಿಡ್-19 ಹಿನ್ನೆಲೆಯಲ್ಲಿ ನಿತ್ಯ ಶೇ.50 ವಿದ್ಯಾರ್ಥಿಗಳಿಗಷ್ಟೇ ಭೌತಿಕ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಕರೊನಾ ನಿಯಂತ್ರಣ ಮಾರ್ಗಸೂಚಿ ಅನುಸಾರ ತರಗತಿ ನಡೆಸಲು ಹಲವೆಡೆ ಸಮರ್ಪಕ ಕೊಠಡಿಗಳೇ ಇಲ್ಲ. ಅಗತ್ಯ ಪೀಠೋಪಕರಣ ಲಭ್ಯವಿಲ್ಲ. ವಿಜ್ಞಾನ ವಿಭಾಗ ಹೊಂದಿರುವ ಗ್ರಾಮೀಣ ಭಾಗದ ಹಲವು ಕಾಲೇಜ್‌ಗಳಲ್ಲಿ ಸುಸಜ್ಜಿತ ಪ್ರಯೋಗಾಲಯಗಳಿಲ್ಲ. ಕೆಲವೆಡೆ ಇದ್ದರೂ ವಿಷಯವಾರು ಪ್ರತ್ಯೇಕ ಕೊಠಡಿ, ಅಗತ್ಯ ಉಪಕರಣಗಳಿಲ್ಲ. ಸಕಾಲಕ್ಕೆ ಮುದ್ರಣವಾಗದ್ದರಿಂದ ಮಾರುಕಟ್ಟೆಯಲ್ಲಿ ಪಠ್ಯ-ಪುಸ್ತಕ ಲಭಿಸುತ್ತಿಲ್ಲ. ಮತ್ತೊಂದೆಡೆ, ಬಹುತೇಕ ಕಾಲೇಜ್‌ಗಳಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದಾಗಿ ವಿದ್ಯಾರ್ಥಿಗಳು ಬೊಧನೆ ವಿಚಾರವಾಗಿ ಪರದಾಡುವಂತಾಗಿದೆ.
ಆರಂಭವಾಗಿಲ್ಲ ಬೋಧನೆ: ಜಿಲ್ಲೆಯಲ್ಲಿ ಆ. 23ರಿಂದಲೇ ಪಿಯು ಭೌತಿಕ ತರಗತಿ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದಲೇ ವಿದ್ಯಾಲಯಕ್ಕೆ ಬರುತ್ತಿದ್ದಾರೆ. ಆದರೆ, ಉಪನ್ಯಾಸಕರ ಕೊರತೆಯಿಂದಾಗಿ ಕೆಲ ಕಾಲೇಜ್‌ಗಳಲ್ಲಿ ಇನ್ನೂ ಇತಿಹಾಸ, ರಾಜ್ಯಶಾಸ ಸೇರಿ ಹಲವು ವಿಷಯಗಳ ಬೋಧನೆ ಆರಂಭವಾಗಿಲ್ಲ. ‘ಕೆಲವೆಡೆ ಅನುದಾನಿತ ಕಾಲೇಜ್ ಉಪನ್ಯಾಸಕರನ್ನು ಸರ್ಕಾರಿ ಕಾಲೇಜ್‌ಗೆ ನಿಯೋಜಿಸಲಾಗಿದೆ. ಆದರೆ, ತಮ್ಮ ಕಾಲೇಜ್‌ನಲ್ಲೇ ಕಾರ್ಯಭಾರ ಹೆಚ್ಚಿದ್ದರಿಂದ ಅವರೂ ಸರ್ಕಾರಿ ಕಾಲೇಜ್‌ಗೆ ಹಾಜರಾಗುತ್ತಿಲ್ಲ. ಇತ್ತ ಪೂರ್ಣಕಾಲಿಕ ಹಾಗೂ ಅತಿಥಿ ಉಪನ್ಯಾಸಕರೂ ಇಲ್ಲದ್ದರಿಂದ ಪಾಠಗಳೇ ನಡೆಯುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಬೈಲಹೊಂಗಲ ಸರ್ಕಾರಿ ಪಿಯು ಕಾಲೇಜ್‌ನಲ್ಲಿ 2,100 (ಕಳೆದ ಬಾರಿ 1,557), ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಕಾಲೇಜ್‌ನಲ್ಲಿ 2,092 (1,637), ಗೋಕಾಕದ ಎಕ್ಸ್ ಮುನ್ಸಿಪಲ್ ಕಾಲೇಜ್‌ನಲ್ಲಿ 1,741 (1,334), ಬೆಳಗಾವಿಯ ಸರ್ದಾರ್ ಕಾಲೇಜ್‌ನಲ್ಲಿ 1,163(863), ಚನ್ನಮ್ಮ ಕಿತ್ತೂರು ಕಾಲೇಜ್‌ನಲ್ಲಿ 1,180 (713) ವಿದ್ಯಾರ್ಥಿಗಳು ಪಿಯು ಪ್ರಥಮ, ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಹೀಗೆ ಬಹುತೇಕ ಎಲ್ಲ ಕಾಲೇಜ್‌ಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಏಕಾಏಕಿ ಹೆಚ್ಚಿದೆ. ಆದರೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ನಡೆಸಲು ಕೊಠಡಿ ಇಲ್ಲದ್ದರಿಂದ ತೊಂದರೆಯಾಗಿದೆ. ಬೈಲಹೊಂಗಲ ಹಾಗೂ ಮಜಲಟ್ಟಿಯಲ್ಲಿ ಎರಡು ಪಾಳಿ ಆಧಾರದಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ತರಗತಿ ನಡೆಸಲಾಗುತ್ತಿದೆ.
ನಾನೇ ಖುದ್ದಾಗಿ ಸರ್ಕಾರಿ ಪಿಯು ಕಾಲೇಜ್‌ಗಳಿಗೆ ತೆರಳಿ ವ್ಯವಸ್ಥೆ ಪರಿಶೀಲಿಸುತ್ತಿದ್ದೇನೆ. ಏನೇ ಕೊರತೆಗಳಾದರೂ ತ್ವರಿತವಾಗಿ ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ. ಕೆಲ ಕಾಲೇಜ್‌ಗಳಲ್ಲಿ ಹೆಚ್ಚುವರಿ ಕೊಠಡಿ ಅಗತ್ಯವಿದ್ದು, ಈ ವಿಚಾರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.| ಪಿ.ಐ. ಭಂಡಾರಿ. ಡಿಡಿಪಿಯು, ಚಿಕ್ಕೋಡಿಹಲವು ಸರ್ಕಾರಿ ಕಾಲೇಜ್‌ಗಳಲ್ಲಿ ಕೊಠಡಿಗಳ ಕೊರತೆ ಎದುರಾಗಿದ್ದರಿಂದ ಪಾಳಿ ಆಧಾರದಲ್ಲಿ ತರಗತಿ ನಡೆಸುವಂತೆ ಪ್ರಾಚಾರ್ಯರಿಗೆ ನಿರ್ದೇಶನ ನೀಡಿದ್ದೇನೆ. ಕಾಲೇಜ್ ಹಂತದಲ್ಲೇ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ಜಿಲ್ಲೆಯ ಸರ್ಕಾರಿ ಪಿಯು ಕಾಲೇಜ್‌ಗಳಲ್ಲಿ ಲಭ್ಯವಿರುವ ಸೌಲಭ್ಯ ಪರಿಶೀಲಿಸಲು 3 ತಂಡ ಸೋಮವಾರ ತೆರಳಲಿದ್ದು, ಅವರ ವರದಿ ಆಧರಿಸಿ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು.| ವಿ.ನಾಗರಾಜ. ಡಿಡಿಪಿಯು, ಬೆಳಗಾವಿ
| ಇಮಾಮಹುಸೇನ್ ಗೂಡುನವರ ಬೆಳಗಾವಿ