ಬಾಗಲಕೋಟೆ: ಮಲಪ್ರಭಾ ನದಿಯ ಪ್ರವಾಹದಿಂದ ಹುನಗುಂದ ತಾಲೂಕಿನ 7 ಗ್ರಾಮಗಳ ಒಟ್ಟು 161 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದ್ದಾರೆ.
ಹುನಗುಂದ ತಾಲೂಕಿನ ಗಂಜೀಹಾಳ ಗ್ರಾಮದಲ್ಲಿರುವ 1110 ಮನೆಗಳ ಪೈಕಿ 25 ಕುಟುಂಬಗಳನ್ನು ಗಂಜಿಹಾಳ ಆಸರೆ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಹಿರೇಮಳಗಾವಿ ಗ್ರಾಮದ 70 ಕುಟುಂಬಗಳನ್ನು ಆಸರೆ ಗ್ರಾಮಕ್ಕೆ, ಹೂವನೂರ ಗ್ರಾಮದ 1 ಕುಟುಂಬವನ್ನು ಸಂಬಂಧಿಕರ ಮನೆಗೆ, ವರಗೋಡದಿನ್ನಿ 2, ಕಜಗಲ್ 37 ಕುಟುಂಬಗಳನ್ನು ಆರ್ ಸಿ ಸೆಂಟರ ಸಮುದಾಯ ಭವನದಲ್ಲಿ ಹಾಗೂ ಚಿತ್ತರಗಿ ಗ್ರಾಮದ 26 ಕುಟುಂಬಗಳನ್ನು ಆಸರೆ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಲಪ್ರಭಾ ನದಿ ದಡದಲ್ಲಿರುವ ಗಂಜೀಹಾಳ ಗ್ರಾಮದ ದೇವಾನಂದ ಕಮ್ಮಾರ (20) ನದಿ ದಡದಲ್ಲಿರುವ ತಮ್ಮ ಜಮೀನಿಗೆ ನೀರು ಹಾಯಿಸಲು ಕೂಡ್ರಿಸಿದ್ದ ಮೋಟಾರ್ ಪಂಪ್‍ಸೆಟ್ ತೆಗೆದುಕೊಳ್ಳಲು ಹೋದಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅಗ್ನಿಶಾಮಕ ತಂಡ ವ್ಯಕ್ತಿಯ ಶೋಧನಾ ಕಾರ್ಯ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.