ಬಳ್ಳಾರಿ : ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿದೆ. ಆದ್ದರಿಂದ, ಸಂಭವನೀಯ ಪ್ರವಾಹ ಹಾನಿ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಸೂಚಿಸಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು. ಯಾವುದೇ ಕ್ಷಣದಲ್ಲಾದರೂ ತುಂಗಭದ್ರಾ ಜಲಾಶಯದಿಂದ ನೀರು ಹರಿಸುವ ಸಾಧ್ಯತೆ ಇದ್ದು, ನದಿ ಪಾತ್ರದ ಗ್ರಾಮಗಳಿಗೆ ಡಂಗೂರ ಮೂಲಕ ಹೆಚ್ಚಿನ ಮುಂಜಾಗ್ರತೆ ನೀಡಬೇಕು. ಬಳ್ಳಾರಿ, ಕಂಪ್ಲಿ ಮತ್ತು ಸಿರುಗುಪ್ಪ ತಾಲೂಕುಗಳ ಹಗರಿ ಮತ್ತು ವೇದಾವತಿ ನದಿಗಳಿಗೆ ಹೊಂದಿಕೊಂಡಿದ್ದು, ಅಪಾಯ ತಲೆದೋರಬಹುದಾದ ಗ್ರಾಮಗಳನ್ನು ಗುರುತಿಸಿ ಮುನ್ನೆಚ್ಚರಿಕೆ ನೀಡಬೇಕು. ಅಲ್ಲಿನ ಮಕ್ಕಳು, ವಯಸ್ಕರು, ಜಾನುವಾರುಗಳನ್ನು ಆಯಾ ಗ್ರಾಮಾಡಳಿತಾಧಿಕಾರಿಗಳ ಸಹಯೋಗದೊಂದಿಗೆ ಗಣತಿ ಮಾಡಿಕೊಂಡು ಇಟ್ಟುಕೊಂಡಿರಬೇಕು ಎಂದು ತಹಶೀಲ್ದಾರರಿಗೆ ನಿರ್ದೇಶಿಸಿದರು. ಜಿಲ್ಲೆಯ ಅಂತರ್ ರಾಜ್ಯ ಗಡಿ ವ್ಯಾಪ್ತಿಯಲ್ಲಿ ಹಗರಿ (ವೇದಾವತಿ), ಸಿರುಗುಪ್ಪ ತಾಲೂಕಿನ ರಾರಾವಿ ಹಾಗೂ ಕಂಪ್ಲಿ ಸೇತುವೆಗಳ ಬಗ್ಗೆ ನಿಗಾ ವಹಿಸಬೇಕು.
ಮಾನ್ಸೂನ್ ಪ್ರಾರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಈ ಕುರಿತು ಡೆಂೆ, ಮಲೇರಿಯಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ವಿಪತ್ತುಗಳು ಎದುರಾದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತವು ಈಗಾಗಲೇ ಬೋಟ್ ಸೇರಿದಂತೆ ಅಗತ್ಯ ಸಲಕರಣೆ (ಲೈಫ್ ಜಾಕೇಟ್) ಗಳನ್ನು ಇರಿಸಿದೆ. ರಕ್ಷಣಾ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಪತ್ತು ನಿರ್ವಹಣೆ ಮಾಡುವಂತೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಹೇಳಿದರು.