ಕೊಳ್ಳೇಗಾಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯು ಪ್ರವಾಹ ಮಟ್ಟದಲ್ಲಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳ ಜನರಿಗೆ ಆತಂಕ ಎದುರಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು. ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಹಳೇ ಹಂಪಾಪುರ, ಮುಳ್ಳೂರು, ಸತ್ತೇಗಾಲದ ಯಡಕೂರಿಯ, ಅಗ್ರಹಾರ ಗ್ರಾಮಗಳಲ್ಲಿ ಪ್ರಭಾವದ ಆಂತಕ ಸೃಷ್ಟಿಸಿದೆ. ಕಳೆದ ತಿಂಗಳ ಹಿಂದಷ್ಟೇ ಬಿದ್ದ ಮಳೆಯಿಂದಾಗಿ ನೂರಾರು ಎಕರೆ ಜಮೀನು ಜಲಾವೃತಗೊಂಡಿದ್ದವು. ಇದೀಗ ವರುಣನ ಆರ್ಭಟ ಪ್ರಾರಂಭವಾಗಿದ್ದು ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ನಿರಂತರ ಮಳೆಗೆ ಸುವರ್ಣಾವತಿ ನದಿ ತುಂಬಿ ಹರಿಯುತ್ತಿದ್ದು ತಾಲೂಕಿನ ಹಳೇ ಹಂಪಾಪುರ, ಮುಳ್ಳೂರು ಗ್ರಾಮಗಳಲ್ಲಿ ಜಮೀನುಗಳು ಜಲಾವೃತವಾಗಿವೆ. ಕೆಲವು ದಿನಗಳ ಹಿಂದಷ್ಟೇ ನಾಟಿ ಮಾಡಿದ್ದ ಭತ್ತದ ಜಮೀನಿಗೆ ನೀರು ನುಗ್ಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಬೆಂಗಳೂರು ರಸ್ತೆಯಲ್ಲಿರುವ ಪಾಪನಕೆರೆ ಕೋಡಿ ಬಿದ್ದು ನರೀಪುರ ಸಮೀಪದ ಕೆಲವು ಜಮೀನಿಗೆ ನಾಲೆ ನೀರು ನುಗ್ಗಿದೆ. ಹೀಗೆ ನೀರು ನಿಂತರೆ ಫಸಲು ನಷ್ಟವಾಗಲಿದೆ ಎಂದು ರೈತರು ಅವಲತ್ತುಕೊಂಡಿದ್ದಾರೆ.
ಸತ್ತೇಗಾಲ ಹ್ಯಾಂಡ್ ಪೋಸ್ಟ್ ಗ್ರಾಮದ ಪರಿಶಿಷ್ಟ ಜನಾಂಗದ ಕಾಲನಿಗೆ ನಾಲೆ ನೀರು ನುಗ್ಗಿ ತೊಂದರೆಯಾಗಿತ್ತು. ಈ ಬಗ್ಗೆ ಅ.16 ರಂದು ವಿಜಯವಾಣಿ ವರದಿ ಪ್ರಕಟಿಸಿತ್ತು ಇದನ್ನು ಗಮನಸಿದ ತಹಸೀಲ್ದಾರ್ ಮಂಜುಳಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ನಿವಾಸಿಗಳಿಗೆ ಧೈರ್ಯ ತುಂಬಿದ್ದಾರೆ.