ಚೆರಿಯಪರಂಬುಗೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು. 
ಜಿಲ್ಲೆ

ಪ್ರವಾಹ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೇಟಿ

ಎ. ಆರ್. ರಘುರಾಮ

ನಾಪೋಕ್ಲು: ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಪ್ರವಾಹದೊಂದಿಗೆ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಹಾನಿ ಉಂಟಾದ ಸ್ಥಳಗಳನ್ನು ಪರಿಶೀಲಿಸಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದರು.

ಚೆರಿಯಪರಂಬು ವ್ಯಾಪ್ತಿಯಲ್ಲಿ ವಾಸವಾಗಿರುವ 70ಕ್ಕೂ ಅಧಿಕ ಕುಟುಂಬ ಪ್ರವಾಹದಿಂದಾಗಿ ಸಂಕಷ್ಟಕೀಡಾಗಿದ್ದು, ಪ್ರವಾಹ ಬಾರದಂತೆ ರಸ್ತೆ ಎತ್ತರಿಸಿ ಸಂಪರ್ಕ ರಸ್ತೆಯನ್ನು ದುರಸ್ತಿಪಡಿಸಲಾಗುವುದು. ಈ ಸಂಬಂಧ ಶಾಸಕರು ಹಾಗೂ ಜಿಲ್ಲಾಧಿಕಾರಿ ಸೂಕ್ತ ವರದಿ ಪಡೆದು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭ ಹಾಜರಿದ್ದ ಗ್ರಾಮಸ್ಥರು ಉಸ್ತುವಾರಿ ಸಚಿವರಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಪ್ರತಿವರ್ಷ ಪ್ರವಾಹದಿಂದಾಗಿ ಚೆರಿಯ ಪರಂಬು ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ಅಲ್ಪಸಂಖ್ಯಾತರು ಹೆಚ್ಚಿರುವ ಸ್ಥಳ ಇದಾಗಿದ್ದು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರಾದ ಪರವಂಡ ಸಿರಜ್, ಅಹಮದ್, ಮಿರ್ಷದ್ ಇತರರು ಅಳಲು ತೋಡಿಕೊಂಡರು. ಬಳಿಕ ಬೇತು ಸಂಪರ್ಕ ರಸ್ತೆ ಸಮೀಪದಲ್ಲಿ ತಡೆಗೋಡೆ ಕುಸಿದು ಹಾನಿಗೀಡಾದ ನಾಲ್ಕು ಅಂಗಡಿ ಮಳಿಗೆಗಳನ್ನು ಸಚಿವರು ವೀಕ್ಷಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚೆರಿಯಪರಂಬುವಿನಲ್ಲಿ ಎರಡು ಕಡೆ ರಸ್ತೆಗಳನ್ನು ಎತ್ತರಿಸುವ ಅಗತ್ಯವಿದೆ. ತಕ್ಷಣ ಕ್ರಿಯಾಯೋಜನೆ ರೂಪಿಸುವಂತೆ ತಾಪಂ ಮತ್ತು ಗ್ರಾಪಂಗೆ ಸೂಚಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದರೆ ಶಾಸಕರೊಂದಿಗೆ ಮಾತನಾಡಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬಹುದು. ಹೆಚ್ಚಿನ ಹಣ ಬೇಕಾದರೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ಸಚಿವರು ಹೇಳಿದರು.

ಶಾಸಕರಾದ ಎ.ಎಸ್‌ಪೊನ್ನಣ್ಣ, ಡಾ. ಮಂತರ್‌ಗೌಡ, ಜಿಲ್ಲಾಧಿಕಾರಿ ವೆಂಕಟ ರಾಜಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್, ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಸೀಲ್ದಾರ್ ಕಿರಣ್ ಗೌರಯ್ಯ, ತಾಪಂ ಇಒ ಶೇಖರ್, ವೃತ್ತ ನಿರೀಕ್ಷಕ ಅನೂಪ್‌ಮಾದಪ್ಪ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸತೀಶ್, ಕಂದಾಯ ಪರಿವೀಕ್ಷಕ ರವಿಕುಮಾರ್ ಇತರರಿದ್ದರು.