ಬೆಳಗಾವಿ ಜಿಲ್ಲಾಧಿಕಾರಿ ಕಚೇಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿತು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಎಚ್.ವಿ. ದರ್ಶನ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ಡಾ.ವಿಕ್ರಂ ಆಮ್ಟೆ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ಇದ್ದರು. 
ಜಿಲ್ಲೆ

ಪ್ರವಾಹ ಎದುರಿಸಲು ಸಿದ್ಧರಾಗಿ

ಬೆಳಗಾವಿ: ಪ್ರವಾಹ ಹಾಗೂ ಅತಿವೃಷ್ಟಿಯಂತಹ ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಜನರ ರಕ್ಷಣೆ, ತಾತ್ಕಾಲಿಕ ಪುನರ್ವಸತಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎಂ.ಜಿ. ಹಿರೇಮಠ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಸಕ್ತ ಸಾಲಿನ ಸಭೆಯಲ್ಲಿ ಅವರು ಮಾತನಾಡಿ, ಈ ಬಾರಿ ಮಳೆಗಾಲ ಸಾಮಾನ್ಯವಾಗಿ ಇರಲಿದೆ ಎಂಬ ವರದಿಗಳಿವೆ. ಆದರೂ ನಾವು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.

ಬುಕ್‌ಲೆಟ್ ಸಿದ್ಧಪಡಿಸಿ: ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ್ದ ಪ್ರವಾಹವನ್ನು ಸಮರ್ಥವಾಗಿ ಎದುರಿಸಲಾಗಿದೆ. ಈ ಬಾರಿಯೂ ಹಿಂದಿನಂತೆಯೇ ತಂಡ ರಚಿಸಲಾಗುವುದು. ಬಳಿಕ ಅಧಿಕಾರಿಗಳು ಹಾಗೂ ತಂಡದ ಕರ್ತವ್ಯಗಳನ್ನು ಪಟ್ಟಿ ಮಾಡಿ ಸಮಗ್ರ ಮಾಹಿತಿ ಹೊಂದಿರುವ ಬುಕ್‌ಲೆಟ್ ಸಿದ್ಧಪಡಿಸಿ ಪ್ರತಿ ತಾಲೂಕಿಗೆ ಹಂಚಬೇಕು ಎಂದು ಸೂಚಿಸಿದರು.

ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಿ: ತುರ್ತು ಸಂದರ್ಭಗಳಲ್ಲಿ ನದಿತೀರದ ಜನರನ್ನು ಮುಂಚಿತವಾಗಿಯೇ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಅಗತ್ಯವಿರುವ ಸಾರಿಗೆ ವ್ಯವಸ್ಥೆ ಸೇರಿ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಗೆ ಅಗತ್ಯವಿರುವ ಬೋಟ್‌ಗಳ ಕುರಿತು ಎಲ್ಲ ಉಪ ವಿಭಾಗಾಧಿಕಾರಿಗಳು ಕೂಡಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಸಿಬ್ಬಂದಿ ಮತ್ತು ಸ್ವಯಂಸೇವಾ ಸಂಸ್ಥೆಗಳ ಪಟ್ಟಿ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ನಾಲಾ ಸ್ವಚ್ಛಗೊಳಿಸಿ: ನದಿತೀರ ಮಾತ್ರವಲ್ಲದೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿರುವ ನಾಲಾ ಹಾಗೂ ಬೃಹತ್ ಚರಂಡಿಗಳನ್ನೂ ಸ್ವಚ್ಛ ಮಾಡಬೇಕಿದೆ. ಇಲ್ಲದಿದ್ದಲ್ಲಿ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ತೊಡಕಾಗಲಿದೆ. ಹೀಗಾಗಿ ಇವುಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಪ್ರವಾಹ ಸಂದರ್ಭದಲ್ಲಿ ಬಳ್ಳಾರಿ ನಾಲಾದಿಂದ ಅನೇಕ ಸಮಸ್ಯೆ ಉದ್ಭವಿಸುತ್ತಿವೆ. ಇದನ್ನೂ ಸಹ ಸ್ವಚ್ಛಗೊಳಿಸಲು ಸಂಬಂಧಿತ ಅಧಿಕಾರಿಗಳು ತಕ್ಷಣವೇ
ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಡ್ಯಾಂ ಮೇಲೆ ನಿಗಾ ಇಡಿ: ಜಿಲ್ಲೆಯ ಹಾಗೂ ನೆರೆಯ ಮಹಾರಾಷ್ಟ್ರದ ಜಲಾಶಯಗಳ ಅಧಿಕಾರಿಗಳ ಜತೆ ನಿರಂತರ ಸಂಪರ್ಕವಿಟ್ಟುಕೊಂಡು ಜಲಾಶಯ ಮಟ್ಟ ಹಾಗೂ ನೀರು ಬಿಡುಗಡೆ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಜಲಾಶಯಗಳಿಂದ ನೀರು ಬಿಡುಗಡೆ ಕುರಿತು ಮುಂಚಿತವಾಗಿಯೇ ಜನರಿಗೆ ತಿಳಿಸುವ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಬೇಕು. ಇದರಿಂದ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬಹುದು. ಪರಿಹಾರ ಕೇಂದ್ರಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್, ಸ್ಯಾನಿಟೈಸರ್ ವಿತರಣೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಪಂ ಸಿಇಒ ಎಚ್.ವಿ. ದರ್ಶನ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ಡಾ.ವಿಕ್ರಂ ಆಮ್ಟೆ, ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶಕುಮಾರ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಲೋಕೋಪಯೋಗಿ ಇಲಾಖೆ, ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ಆರೋಗ್ಯ, ಪಶುಪಾಲನೆ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಂಟ್ರೋಲ್ ರೂಮ್ ಸ್ಥಾಪಿಸಿ

ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಒದಗಿಸಲು ಎಲ್ಲ ತಾಲೂಕು ಹಾಗೂ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 24್ಡ7 ಕಂಟ್ರೋಲ್ ರೂಮ್ ಸ್ಥಾಪಿಸಬೇಕು. ಈ ಕಂಟ್ರೋಲ್ ರೂಮ್ಗಳು ಜಿಲ್ಲಾ ಮಟ್ಟದ ಕಂಟ್ರೋಲ್ ರೂಮ್ ಜತೆಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಂಬಂಧಿಸಿದ ನೋಡಲ್ ಅಧಿಕಾರಿಗಳು ನಿಯೋಜಿತ ತಾಲೂಕುಗಳಲ್ಲಿ ಸಭೆ ನಡೆಸಿ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಬೇಕು. ಪ್ರವಾಹ ಹಾಗೂ ಅತಿವೃಷ್ಟಿ ಬಳಿಕ ಅನೇಕ ಬಗೆಯ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಇರುತ್ತವೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಜನ-ಜಾನುವಾರುಗಳಿಗಾಗಿ ಅಗತ್ಯ ಔಷಧ ದಾಸ್ತಾನು ಮಾಡಿಕೊಳ್ಳಬೇಕು. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ರೈತ ಕುಟುಂಬಗಳ ಜಾನುವಾರುಗಳಿಗೂ ಮೇವು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.