ಹಾಸನ: ಜಿಲ್ಲೆಯ ಪ್ರಾವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕ್ರಮಬದ್ಧವಾಗಿ ಮೂಲ ಸೌಕರ್ಯ ನೀಡಿ ಎಂದು ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಕೆ ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ, ಹೋಟೆಲ್, ರೆಸಾರ್ಟ್ ಮತ್ತು ಹೊಂ ಸ್ಟೇ ಮಾಲೀಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಗೆ ಬರುವ ಅತಿಥಿಗಳಿಗೆ ಉತ್ತಮ ಆತಿಥ್ಯ ಸಿಕ್ಕರೆ ಜಿಲ್ಲೆಯ ಹೆಸರು ಪ್ರಖ್ಯಾತಿಗೊಳ್ಳುತ್ತದೆ ಎಂದರು.
ಪ್ರವಾಸಿಗರ ಆಕರ್ಷಣೆಗೆ ವಿನೂತ ಪ್ರಯೋಗ ಮತ್ತು ಪ್ರವಾಸಿ ತಾಣಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಸರ್ಕಾರದಿಂದ ಆಗಬೇಕಿದ್ದು, ಪ್ರವಾಸೋದ್ಯಮ ಬೆಳವಣಿಗೆಯಾದರೆ, ಉದ್ಯೋಗ ಸೃಷ್ಟಿ ಆಗುತ್ತದೆಯಲ್ಲದೇ, ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಪ್ರವಾಸೋದ್ಯಮ ಇಲಾಖೆ ದೇಶದ ಆದಾಯ ಹೆಚ್ಚಿಸುವ ಪ್ರಮುಖ ಅಂಶವಾಗಿದ್ದು, ಭಾರತ ಮುಂಚುಣಿಯಲ್ಲಿರುವದು ಹೆಮ್ಮೆಯ ವಿಷಯ ಎಂದರು.
ಸಕಲೇಶಪುರ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚನ ಅವಕಾಶಗಳಿದ್ದು ರಸ್ತೆ ಮತ್ತಿತರ ಸೌಕರ್ಯಗಳ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಶಾಸಕರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕವಿತಾ ರಾಜಾ ರಾಮ್ ಮಾತನಾಡಿ, ಪ್ರತಿಯೊಂದು ತಾಲ್ಲೂಕಿನಲ್ಲೂ ಪ್ರವಾಸಿ ತಾಣಗಳನ್ನು ಗುರುತಿಸಬಹುದಾಗಿದ್ದು, ಜಿಲ್ಲೆಯ ಜನತೆ ಹೊರ ರಾಜ್ಯಗಳಿಗೆ ಪ್ರವಾಸ ಹೋಗುವ ಬದಲು ನಮ್ಮಲ್ಲಿಯೇ ಇರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಸ್ವಚ್ಛತೆ ಕಡೆ ಗಮನ ಹರಿಸಿ ಪ್ರವಾಸಿಗರಿಗೆ ಸರಿಯಾದ ಮೂಲ ಸೌಕರ್ಯ ಒದಗಿಸುವ ಮೂಲಕ ಜಿಲ್ಲೆಯ ಹೆಸರನ್ನು ಮತ್ತಷ್ಟು ಪ್ರಖ್ಯಾತಿಗೊಳಿಸುವಲ್ಲಿ ಶ್ರಮಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜು ಮಾತನಾಡಿ, ಬಡವರ ಊಟಿ ಎಂದೇ ಪ್ರಖ್ಯಾತಿಗೊಂಡಿರುವ ಜಿಲ್ಲೆಯು ಅತ್ಯಂತ ಸುಂದರ ಪ್ರವಾಸಿ ತಾಣಗಳ ಮುಖ್ಯ ಕೇಂದ್ರವಾಗಿದ್ದು, ಪ್ರವಾಸಿ ಸ್ಥಳಗಳಲ್ಲಿ ಉತ್ತಮವಾದ ಪರಿಸರ ವಾತಾವರಣ ನಿರ್ಮಿಸಲು ಒತ್ತು ನೀಡಿದರೆ ಪ್ರವಾಸೋದ್ಯಮದ ಅಭಿವೃದ್ಧಿ ಮತ್ತಷ್ಟು ಹೆಚ್ಚಲಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎ.ಡಿ ಸಂಜಯ್ ಕುಮಾರ್ ಮಾತನಾಡಿ ಜಿಲ್ಲೆಯ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ಹೊಯ್ಸಳ ದೇವಾಲಯಗಳನ್ನು 2022-23 ನೇ ಸಾಲಿನ ಯುನೆಸ್ಕೋ ಪಟ್ಟಿಗೆ ನಾಮನಿರ್ದೇಶನಕ್ಕಾಗಿ ಆಯ್ಕೆ ಮಾಡಲಾಗಿದ್ದು, ಕರ್ನಾಟಕಕ್ಕೆ ವಿಶೇಷವಾಗಿ ಹಾಸನ ಜಿಲ್ಲೆಗೆ ಹೆಮ್ಮೆತರುವಂತಹ ವಿಷಯವಾಗಿದೆ ಎಂದರು.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ 2022-23ನೇ ಸಾಲಿನ ಬಜೆಟ್ ನಲ್ಲಿ ಬೇಲೂರು ಹಳೇಬೀಡು-ಸೋಮನಾಥಪುರ ಸರ್ಕ್ಯೂಟ್ ಯೋಜನೆಯಡಿ ಅಭಿವೃದ್ಧಿಪಡಿಸಲು ರೂ.10.00 ಕೋಟಿ ಘೋಷಣೆ ಮಾಡಲಾಗಿದ್ದು, ಬೇಲೂರು ಮತ್ತು ಹಳೇಬೀಡು ದೇವಾಲಯಗಳ ಬಳಿ ತಲಾ ರೂ.3.35 ಕೋಟಿ ಅಂದಾಜು ಮೊತ್ತದಲ್ಲಿ ವಿವಿಧ ಪ್ರವಾಸಿ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ ಮಾತನಾಡಿ, ಅನೇಕ ದೇಶಗಳು ಪ್ರವಾಸೋದ್ಯಮದಿಂದ ದೇಶದ ಆದಾಯ ತರುವಲ್ಲಿ ಶ್ರಮಿಸುವರು ಅದರಂತೆ ಭಾರತ ದೇಶದಲ್ಲಿ ಕರ್ನಾಟಕದಲ್ಲಿ ಅಂತಹ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದರು.
ಕಾರ್ಯಕ್ರಮದ ಕಾರ್ಯಗಾರದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆಯ ಸದಸ ಸಂತೋಷ್ ಕೆಂಚಾಂಬ, ಹಾಲೋ ಹೋಟೆಲ್ ಸಹ ಸಂಸ್ಥಾಪಕ ದಿನೇಶ್ ಭಟ್, ಪ್ರವಾಸಿ ಅಧಿಕಾರಿ ನಾಗಾರಜ್, ಕಿಲೋ ಮೀಟರ್ ಟೂರಿಸಂ ವ್ವಯಸ್ಥಾಪಕ ನಿರ್ದೇಶಕರಾದ ಪಿ.ಜೆ ಶಯಾಜನ್, ಕ್ಲಾಸಿಕ್ ಗ್ರೂಪ್ಸ್‌ನ ಚಾಂದಿನಿ, ರೊ ಸೆಟ್ಟಿ ಹೋಟೆಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಜೈ ಶ್ರೀಧರ್ ವಿಚಾರ ಮಂಡಿಸಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರೇವತಿ ಸುಧಾಕರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಹೋಟೆಲ್ ಸಂಘದ ಅಧ್ಯಕ್ಷ ಅಭಿನಂದನ್, ರೆಸಾರ್ಟ್ ಸಂಘದ ಅಧ್ಯಕ್ಷ ಲೋಕೇಶ್ ಇತರರು ಇದ್ದರು.