ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.
ಹೊನ್ನೇಕೊಡಿಗೆಯಲ್ಲಿ ನಿರ್ಮಿಸುತ್ತಿರುವ ಸೇತುವೆ ಸಮೀಪ ಪ್ರವಾಸೋದ್ಯಮಕ್ಕಾಗಿ ಗುರುತಿಸಿರುವ 3 ಎಕರೆ ಜಾಗವನ್ನು ಶುಕ್ರವಾರ ವೀಕ್ಷಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ 4-5 ವಿಭಾಗ ಬರಲಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಪ್ರವಾಸಿ ತಾಣಗಳನ್ನು ಗುರುತಿಸಬೇಕಾಗಿದೆ. ಮುಖ್ಯವಾಗಿ ಪ್ರವಾಸಿ ತಾಣಕ್ಕೆ ಸಾರಿಗೆ ಸೌಲಭ್ಯ, ವಸತಿ ಸೌಕರ್ಯ ನೀಡಬೇಕು. ಕೊಡಗು, ಸಕಲೇಶಪುರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಪ್ರದೇಶಗಳನ್ನು ಗುರುತಿಸಿದ್ದೇವೆ. ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.
ಪಶ್ಚಿಮ ಘಟ್ಟದಲ್ಲಿ ವಿಶೇಷವಾಗಿ ಹಲವಾರು ಮಠಗಳು ಹಾಗೂ ಪುರಾತನ ದೇವಸ್ಥಾನಗಳಿವೆ. ಮಲೆನಾಡು ಭಾಗಕ್ಕೆ ಪ್ರವಾಸಿಗರು ಬಂದಾಗ ಶೃಂಗೇರಿ, ಧರ್ಮಸ್ಥಳ, ಹೊರನಾಡು, ಕಿಗ್ಗ್ಗಾದ ದೇವಸ್ಥಾನ, ಸಿರಿಮನೆ ಜಲಪಾತ, ಭದ್ರಾ ಹಿನ್ನೀರಿನ ಪಕ್ಕದ ಜಂಗಲ್, ಭದ್ರಾ ಹಿನ್ನೀರಿನಲ್ಲಿ ಬೋಟ್ ವ್ಯವಸ್ಥೆ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಔಷಧ ವನ ಮುಂತಾದವುಗಳನ್ನು ವೀಕ್ಷಣೆ ಮಾಡಬಹುದು. ಜತೆಗೆ ಜಂಗಲ್ ಸಫಾರಿ ಮಾಡುವ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಎಂಡಿ ರಾಜೇಶ್ ಮಾತನಾಡಿ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕೇವಲ 40 ಕಿ.ಮೀ. ದೂರದಲ್ಲಿ ಎನ್.ಆರ್.ಪುರ ತಾಲೂಕು ಇರುವುದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ತಾಲೂಕನ್ನು ಕೇಂದ್ರ ಬಿಂದುವಾಗಿ ಮಾಡಲಾಗಿದೆ. ವಿಮಾನ ನಿಲ್ದಾಣದಿಂದ 1 ಗಂಟೆಯಲ್ಲಿ ವಾಹನದಲ್ಲಿ ಪ್ರವಾಸಿಗರು ಎನ್.ಆರ್.ಪುರಕ್ಕೆ ಬರಬಹುದಾಗಿದೆ. ಜತೆಗೆ ತಾಲೂಕಿನಲ್ಲಿ ತುಂಗಾ, ಭದ್ರಾ ನದಿ ಹರಿಯುತ್ತಿವೆ. ವನ್ಯಜೀವಿ ಇರುವ ಅಭಯಾರಣ್ಯವೂ ಹತ್ತಿರದಲ್ಲೇ ಇದೆ ಎಂದರು.
ತಹಸೀಲ್ದಾರ್ ತನುಜಾ ಸವದತ್ತಿ, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಪಪಂ ಸದಸ್ಯ ಮುನಾವರ್ ಪಾಷಾ, ಮಾಜಿ ಉಪಾಧ್ಯಕ್ಷ ಸುನೀಲ್ ಇದ್ದರು.