ಕಾನಹೊಸಹಳ್ಳಿ: ಗುಡೇಕೋಟೆಯಲ್ಲಿ ಪುರಾತನ ಸ್ಮಾರಕ, ಕರಡಿಧಾಮವಿದ್ದು, ಪ್ರವಾಸೋದ್ಯಮಕ್ಕೆ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಗುಡೇಕೋಟೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಒನಕೆ ಓಬವ್ವ ಉತ್ಸವಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯುವ ರೈತರಿರುವುದರಿಂದ ರಾಜ್ಯದಲ್ಲೇ ಮೊದಲ ಶೀತಲೀಕರಣ ಘಟಕ ಸ್ಥಾಪಿಸಲು ಅನುದಾನ ತಂದಿರುವೆ ಎಂದರು.
ಉತ್ಸವಕ್ಕೆ ಸೀಮಿತವಾಗದೆ ಗುಡೇಕೋಟೆ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಿರುವೆ. ಈಗಾಗಲೆ 14 ಕೋಟಿ ರೂ. ವೆಚ್ಚದಲ್ಲಿ ಕೆರೆ ಮತ್ತು ರಸ್ತೆ ಅಭಿವೃದ್ಧಿಗೆ ಅನುಮೋದನೆ ಸಿಕ್ಕಿದೆ. ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡೋಣ. ಕ್ಷೇತ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸೋಣ ಎಂದು ಹೇಳಿದರು.
ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ದೇಸಿ ಕಲೆಗಳ ಆನಾವರಣಕ್ಕೆ ಒನಕೆ ಓಬವ್ವ ಉತ್ಸವ ಸಾಕ್ಷಿಯಾಗಿದೆ. ಹಂಪಿ ಉತ್ಸವಕ್ಕೆ ನೀಡುವ ಮಹತ್ವ ಓಬವ್ವನ ಉತ್ಸವಕ್ಕೂ ನೀಡಬೇಕಿದೆ. ಉತ್ಸವದ ರೂವಾರಿ ಶಾಸಕರಾಗಿದ್ದಾರೆ ಎಂದರು.
ಕಾನಾಮಡುಗು ದಾ.ಮ.ಶರಣಾರ್ಯರು, ಅಂಚೆ ಇಲಾಖೆ ಉತ್ತರ ವಲಯದ ನಿರ್ದೇಶಕಿ ವಿ.ತಾರಾ, ಜಿಲ್ಲಾ ಅಧೀಕ್ಷಕ ಚಿದಾನಂದ ಪದ್ಮಸಾಲಿ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಗುಡೇಕೋಟೆ ಪಾಳೇಗಾರ ವಂಶಸ್ಥ ಶಿವರಾಜ ವರ್ಮ, ಜರಿಮಲೆ ಪಾಳೇಗಾರ ವಂಶಸ್ಥ ಇಮ್ಮಡಿ ಸಿದ್ದಪ್ಪನಾಯಕ, ಒನಕೆ ಓಬವ್ವ ವಂಶಸ್ಥ ರಾಜಣ್ಣ, ಜಿಪಂ ಮಾಜಿ ಸದಸ್ಯರಾದ ನರಸಿಂಹನಗಿರಿ ವೆಂಕಟೇಶ್, ಕೆ.ಎಂ.ಶಶಿಧರ, ಪ್ರಮುಖರಾದ ಎನ್.ಟಿ.ತಮ್ಮಣ್ಣ, ಸೂರ್ಯಪಾಪಣ್ಣ, ಎನ್.ಪಿ.ಮಂಜುನಾಥ, ಅಡಿವೆಪ್ಪ, ಹಿರೇಕುಂಬಗುಂಟೆ ಉಮೇಶ್, ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ನರಸಪ್ಪ, ನಾಗರಾಜ ಕೋಟ್ಟಪ್ಪಗಳ ಇತರರಿದ್ದರು.