ಸಕಲೇಶಪುರ: ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರು ಬಿಸಾಡುವ ತ್ಯಾಜ್ಯಗಳಿಂದ ಪರಿಸರ ಹಾಳಾಗುತ್ತಿದೆ ಎಂದು ಹಾಸನ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಬಸವರಾಜ್ ಬೇಸರ ವ್ಯಕ್ತಪಡಿಸಿದರು.
68ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಯಸಳೂರು ವಲಯದ ವತಿಯಿಂದ ತಾಲೂಕಿನ ಹೆತ್ತೂರು ಹೋಬಳಿಯ ಬಿಸಿಲೆ ಮೀಸಲು ಅರಣ್ಯ ಪ್ರದೇಶದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಹಾಗೂ ಇತರ ಅಪಾಯಕಾರಿ ವಸ್ತುಗಳನ್ನು ತೆರವುಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಪ್ಲಾಸ್ಟಿಕ್ ಇತರ ರಾಸಾಯನಿಕ ವಸ್ತುಗಳನ್ನು ಅರಣ್ಯ ಪ್ರದೇಶಗಳಲ್ಲಿ ಬಿಸಾಡುವುದರಿಂದ ವನ್ಯಜೀವಿಗಳ ಪ್ರಾಣಕ್ಕೆ ತೊಂದರೆಯಾಗಲಿದೆ. ಈ ಬಗ್ಗೆ ನಾಮಫಲಕ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅರಣ್ಯ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರು ಪ್ರಕೃತಿಯನ್ನು ಆನಂದಿಸಬೇಕೇ ಹೊರತು, ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಸಾಡಬಾರದು. ಸ್ಥಳೀಯರು ಹಾಗೂ ಪ್ರವಾಸಿಗರು ಪ್ಲಾಸ್ಟಿಕ್, ಇತರ ವಸ್ತುಗಳನ್ನು ಬಿಸಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಹೆಚ್ಚು ಜಾಗೃತರಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಬಿಸಿಲೆ ಅರಣ್ಯದ ಗೇಟ್‌ನಿಂದ ಚೌಡೇಶ್ವರಿ ದೇವಾಲಯದ ಗಡಿ ಪ್ರದೇಶದವರೆಗೂ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈ ಭಾಗದಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುವುದರಿಂದ ಎಲ್ಲೆಂದರಲ್ಲಿ ಬಿಸಾಕಿರುವ ಕಸವನ್ನು ಸಂಗ್ರಹಿಸಲಾಯಿತು. ಅರಣ್ಯವ್ಯಾಪ್ತಿ ಪ್ರದೇಶದ ಸುತ್ತಮುತ್ತ ಸುಮಾರು ಒಂದು ಟನ್‌ಗೂ ಅಧಿಕ ಪ್ಲಾಸ್ಟಿಕ್ ಕಸ ಸಂಗ್ರಹಣೆ ಮಾಡಲಾಯಿತು.
ಸಕಲೇಶಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಯಸಳೂರು ವಲಯ ಅರಣ್ಯಾಧಿಕಾರಿ ಜಗದೀಶ್, ಉಪವಲಯ ಅರಣ್ಯ ಅಧಿಕಾರಿಗಳು, ಅರಣ್ಯ ರಕ್ಷಕರು, ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದ್ದರು.