ಜಿಲ್ಲೆ

ಪ್ರವಾಸಿಗರ ಸೇವೆಗೆ ಲಭ್ಯವಾಗದ ಯಾತ್ರಿ ನಿವಾಸ

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ನಗರದ ಹೊರವಲಯ ಸೀಬಾರ ಬಳಿ ಕುಟೀರ ಯೋಜನೆಯಡಿ ನಿರ್ಮಿಸಿರುವ ಯಾತ್ರಿ ನಿವಾಸವನ್ನು ಹಸ್ತಾಂತರ ಮಾಡಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ಕುಂಟು ನೆಪಗಳನ್ನು ಹುಡುಕುತ್ತಿದೆಯೆ?

ಇಲಾಖೆ ಯೋಜನೆಯಡಿ ಕಳೆದ ಎರಡು ವರ್ಷಗಳ ಹಿಂದೆ ಮಂಜೂರಾಗಿದ್ದ ಈ ಯಾತ್ರಿ ನಿವಾಸ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಪೂರ್ಣಗೊಳಿಸಿ ಮೂರ‌್ನಾಲ್ಕು ತಿಂಗಳು ಕಳೆದಿದ್ದರೂ ಕಾರ್ಯಾರಂಭಕ್ಕೆ ಹಿಂದೇಟು ಹೊಡೆಯುತ್ತಿದೆ.

ಪಿಡಬ್ಲುೃಡಿ ಇಲಾಖೆಯಿಂದ ಹಸ್ತಾಂತರ ಪಡೆದ ಬಳಿಕ ಟೆಂಡರ್ ಕರೆದು ಅದರ ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ಪ್ರವಾಸೋದ್ಯಮ ಇಲಾಖೆ ವಹಿಸಬೇಕಿದೆ. ಆದರೆ, ಹಸ್ತಾಂತರ ತಡವಾದಷ್ಟು ನಿವಾಸದ ಕಾರ್ಯಾರಂಭ ಇನ್ನಷ್ಟು ತಿಂಗಳು ವಿಳಂಬವಾಗಲಿದೆ.

ಚಿತ್ರದುರ್ಗ-ದಾವಣಗೆರೆ ಎನ್‌ಎಚ್ 48ರ ಮಾರಘಟ್ಟ ಸರ್ವೆ ನಂ.55ರ ಎರಡು ಎಕರೆ ಪ್ರದೇಶದಲ್ಲಿ 1801 ಚದರಡಿ ವಿಸ್ತೀಣದಲ್ಲಿ ಕಟ್ಟಡ ತಲೆ ಎತ್ತಿದೆ. ಆರಂಭದಲ್ಲಿ 4 ಕೋಟಿ ರೂ., ಬಳಿಕ 2 ಕೋಟಿ ರೂ., ಅಂತಿಮವಾಗಿ ಒಟ್ಟಾರೆ 8.33 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿದೆ.

ಎಂಟು ಸುಸಜ್ಜಿತ ಕೊಠಡಿಗಳು, ಎರಡು ವಾಣಿಜ್ಯ ಮಳಿಗೆಗಳು, ವೆಜ್ ಮತ್ತು ನಾಜ್‌ವೆಜ್ ಕಿಚನ್‌ಗಳು,ಫುಡ್‌ಕೌಂಟರ್‌ಗಳು, ಒಂದು ತಾಯಿ ಮಗು ಆರೈಕೆ ಕೊಠಡಿ, ಡೈನಿಂಗ್‌ಹಾಲ್, ಸಾರ್ವಜನಿಕ ಶೌಚಗೃಹ ಇತ್ಯಾದಿ ಅಗತ್ಯ ಮೂಲ ಸೌಕರ್ಯಗಳಿವೆ. 15ಕ್ಕೂ ಹೆಚ್ಚು ಕಾರುಗಳು, ಆರೇಳು ಬಸ್ಸುಗಳ ನಿಲುಗಡೆಗೆ ಅವಕಾಶವಿರುವ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ.

ಕುಡಿವ ನೀರಿಗೆ ಒಂದು ಕೊಳವೆ ಬಾವಿ ಕೊರೆಸಲಾಗಿದೆ. ಆರ್‌ಒ ಘಟಕವೂ ಇದೆ. ಆರ್ಚ್‌ನ್ನೂ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಕಂಟ್ರಾಕ್ಟರ್‌ಗೆ ಬಿಲ್ ಪಾವತಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

ಪ್ರವಾಸೋದ್ಯಮ ಇಲಾಖೆ ಸಂಬಂಧಿಸಿದ ಅಧಿಕಾರಿಗಳು ಕಟ್ಟಡವನ್ನು ಪರಿಶೀಲಿಸಿ ಹಸ್ತಾಂತರ ಮಾಡಿಕೊಳ್ಳಬಹುದೆಂದು ಶಿಫಾರಸು ಮಾಡಿದ್ದಾರೆ. ಆದರೂ ಟೂರಿಸಂ ಡಿಪಾರ್ಟ್‌ಮೆಂಟ್‌ಗೆ ಇನ್ನೂ ಹಸ್ತಾಂತರವಾಗಿಲ್ಲ. ರಾಜ್ಯದ ಅತ್ಯುತ್ತಮ ಪ್ರವಾಸಿತಾಣಗಳಲ್ಲಿ ಒಂದಾಗಿರುವ ಚಿತ್ರದುರ್ಗ ಜಿಲ್ಲೆಗೆ ಪ್ರವಾಸಿಗರ ಭೇಟಿ ಅಧಿಕ ಸಂಖ್ಯೆಯಲ್ಲಿದೆ.

ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿವಾಸ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಿದೆ. ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತವಾಗದೇ ಇರುವ ಬಗ್ಗೆ ತಿಳಿದುಕೊಳ್ಳಲು ಕರೆ ಮಾಡಿದರೆ ಇಲಾಖೆ ಸಹಾಯಕ ನಿರ್ದೇಶಕರು ಸ್ವೀಕರಿಸಲಿಲ್ಲ.

...ಕೋಟ್...

ಯಾತ್ರಿ ನಿವಾಸ ಕಾಮಗಾರಿ ಪೂರ್ಣಗೊಳಿಸಿ ನಮ್ಮ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ಸಿದ್ಧವಾಗಿದ್ದೇವೆ. ಆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಹಸ್ತಾಂತರ ಮಾಡಿಕೊಳ್ಳಲು ಸಮ್ಮತಿಸಿದ್ದಾರೆ. ಆದರೂ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗಿಲ್ಲ.

ಸಿ. ಚಂದ್ರಪ್ಪ, ಎಇಇ, ಲೋಕೋಪಯೋಗಿ ಇಲಾಖೆ, ಚಿತ್ರದುರ್ಗ

---