ಜಿಲ್ಲೆ

ಪ್ರವಾಸಿ ತಾಣಗಳಿಗೆ ಜನರ ಲಗ್ಗೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬರುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ, ದೀಪಾವಳಿ ಹಾಗೂ ಇನ್ನಿತರೆ ವಾರಾಂತ್ಯ ಸಾಲು ರಜೆಗಳನ್ನು ಕಳೆಯಲು ಪ್ರವಾಸಿಗಳು ಹಲವಾರು ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟಿದ್ದಾರೆ.

ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು ತಾಲೂಕಿನ ವ್ಯಪ್ತಿಯಲ್ಲಿ ಬರುವ ಪ್ರಸಿದ್ಧ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಸಾಲು ರೆಜೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಇನ್ನಿತರೆ ಪ್ರವಾಸಿತಾಣಗಳು. ಚಾಮರಾಜನಗರ ತಾಲೂಕಿನ ಸುವರ್ಣವತಿ-ಚಿಕ್ಕಹೊಳೆ ಅವಳಿ ಜಲಾಶಯಗಳು, ಕನಕಗಿರಿ, ಕೆ.ಗುಡಿ, ಬೆಲ್ಲವತ್ತಾ ಹಾಗೂ ಇನ್ನಿತರೆ ಪ್ರಸಿದ್ಧ ಸ್ಥಳಗಳು.

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ, ಹನೂರು ತಾಲೂಕಿನ ಮಲೆಮಹದೇಶ್ವರಸ್ವಾಮಿ ಬೆಟ್ಟ, ನಾಗಮಲೆ, ಮಲೆಮಹದೇಶ್ವರಸ್ವಾಮಿ ವನ್ಯಜೀವಿಧಾಮ, ಟಿಬೇಟಿಯನ್ ಕ್ಯಾಂಪ್, ಕೊಳ್ಳೇಗಾಲ ತಾಲೂಕಿನ ವ್ಯಪ್ತಿಯಲ್ಲಿ ಬರುವ ಭರಚುಕ್ಕಿ, ಶಿವನಸಮುದ್ರ, ದರ್ಗಾ, ಗುಂಡಾಲ್ ಜಲಾಶಯ ಹಾಗೂ ಇನ್ನಿತರೆ ಪ್ರವಾಸಿ ತಾಣಗಳಿಗೆ ಪ್ರವಾಸಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದ ಜತೆಗೆ ಪ್ರವಾಸಿ ತಾಣಗಳಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಮುಂದಾಗಿದ್ದಾರೆ. ಹಚ್ಚ ಹಸಿರಿನಿಂದ ಕಾಣುವ ಅರಣ್ಯಪ್ರದೇಶ, ವನ್ಯಜೀವಿಗಳ ದರ್ಶನ, ತುಂಬಿರುವ ಜಲಾಶಯಗಳನ್ನು ಕಾಣುವುದರ ತೆಗೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಮೈಸೂರು, ಬೆಂಗಳೂರು ಮತ್ತು ಇನ್ನಿತರೆ ಜಿಲ್ಲೆಗಳು ಮಾತ್ರವಲ್ಲದೇ ಹೊರರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗಳು ಜಿಲ್ಲೆಗೆ ಲಗ್ಗೆ ಇಟ್ಟಿರುವುದರಿಂದ ವ್ಯಾಪಾರ ವಹಿವಾಟು ಕೂಡ ಉತ್ತಮವಾಗಿ ನಡೆಯುತ್ತಿದ್ದು, ಸಾಲು ರಜೆಗಳು ಜಿಲ್ಲೆಯ ಪ್ರಾವಾಸೋದ್ಯಮ ಮತ್ತಷ್ಟು ಚೇತರಿಕೆ ಕಂಡಂತಾಗಿದೆ.

ಮಾದಪ್ಪನ ಬೆಟ್ಟದಲ್ಲಿ ಜನಸಾಗರ:

ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಮಲೆ ಮಹದೇಶ್ವರಬೆಟ್ಟದ ದೀಪಾವಳಿ ಜಾತ್ರೆ ಅಂಗವಾಗಿ ಲಕ್ಷಾಂತರ ಜನ ಭಕ್ತರು ಭೇಟಿ ನೀಡಿದ್ದಾರೆ. ಇತ್ತೀಚೆಗೆ ನಾಗುಮಲೆ ಪ್ರವೇಶಕ್ಕೆ ಭಕ್ತರಿಗೆ ಮುಕ್ತ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಅಲ್ಲಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಚಾರಣಿಗರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಚಾಮರಾಜನಗರ, ಮೈಸೂರು, ರಾಮನಗರ, ಕನಕಪುರ, ಚನ್ನಪಟ್ಟಣ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪಾದಯಾತ್ರೆಯ ಮೂಲಕವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ದೀಪಾವಳಿ ಜಾತ್ರೆಯ ಸಂದರ್ಭದಲ್ಲಿ ಸಾಲು ರಜೆಗಳು ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಭಕ್ತರು ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಜನ:

ಶ್ರೀ ಮಲೆ ಮಹದೇಶ್ವರ ಬೆಟ್ಟದ ನಂತರ ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೆ.ಗುಡಿ, ಬಂಡೀಪುರ ಅರಣ್ಯ ಪ್ರದೇಶ, ಭರಚುಕ್ಕಿ ಜಲಪಾತ, ಹೊಗೇನಕಲ್ ಾಲ್ಸ್ ಹಾಗೂ ಇನ್ನಿತರೆ ಪ್ರದೇಶಗಳ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಹಲವೆಡೆ ದೇವಾಲಯಗಳು ಇದ್ದರೂ ಕೂಡ ಅಲ್ಲಿನ ವಾತಾವರಣವನ್ನು ಆಸ್ವಾದಿಸುವುದಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ ಸೃಷ್ಟಿಸುವ ಭರಚುಕ್ಕಿ ಜಲಾಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನರು ಲಗ್ಗೆ ಇಟ್ಟಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶ ಹಾಗೂ ಕೆ.ಗುಂಡಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸಾರಿ ಸಂತೋಷವನ್ನು ಸವಿಯಲು ಹೆಚ್ಚಿನ ಜನರು ಆಗಮಿಸಿದ್ದಾರೆ. ಹನೂರಿನ ಒಡೆಯರಪಾಳ್ಯದಲ್ಲಿರುವ ಟಿಬೇಟಿಯನ್ ನಿರಾಶ್ರಿತರ ಕೇಂದ್ರದಲ್ಲಿರುವ ದೇವಾಲಯಗಳಿಗೆ ತಮಿಳುನಾಡು ಮತ್ತು ಇನ್ನಿತರೆ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ವ್ಯಾಪಾರ ಚುರುಕು, ಸಾರಿಗೆಗೆ ಶಕ್ತಿ:

ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರು ಸಾಲು ರಜೆಗಳ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದು, ವ್ಯಾಪಾರ ವಹಿವಾಟು ಹಾಗೂ ಕೆಎಸ್‌ಆರ್‌ಟಿಸಿ ಸಂಸ್ಥೆಯ ಆದಾಯಕ್ಕೂ ಶಕ್ತಿ ಬಂದಂತಾಗಿದೆ. ಮಹದೇಶ್ವರ ಬೆಟ್ಟಕ್ಕೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಸಾರಿಗೆ ವ್ಯವಸ್ಥೆ ಮಾಡಿದ್ದು, ಪ್ರಯಾಣಿಕರು ತುಂಬಿತುಳುಕುತ್ತಿದ್ದರು. ಮಹದೇಶ್ವರಬೆಟ್ಟದ ನಾಗುಮಲೆ ಪ್ರವೇಶದಿಂದ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು ತೆರೆದು ವ್ಯಪಾರ ಗರಿಗೆದರಿದೆ. ಮಹದೇಶ್ವರ ಬೆಟ್ಟ ಅಲ್ಲದೇ ಇನ್ನಿತರೆ ಕಡೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾಣಿಸಿಕೊಂಡಿದ್ದರಿಂದ ಹೋಟೆಲ್ ಹಾಗೂ ಇನ್ನಿತರೆ ವ್ಯಾಪಾರಕ್ಕೆ ಶಕ್ತಿಬಂದಂತಾಗಿದೆ. ಜಿಲ್ಲೆಯ ಹಲವೆಡೆ ಕೆಲವು ಜಾತ್ರೆ ಮತ್ತು ವಿಶೇಷ ಪೂಜೆಗಳು ನಡೆದಿದ್ದು, ಅಲ್ಲಿಯೂ ಕೂಡ ಹೆಚ್ಚಿನ ರೀತಿಯಲ್ಲಿ ವ್ಯಾಪಾರ ವಹಿವಾಟು ನಡೆಯಿತು.

ಹನೂರು ತಾಲೂಕಿನ ಒಡೆಯರಪಾಳ್ಯದಲ್ಲಿರುವ ಟಿಬೇಟಿಯನ್ ಕ್ಯಾಂಪ್‌ಗೆ ಗೆಳೆಯರೊಂದಿಗೆ ಭೇಟಿ ನೀಡಿದ್ದೇವು. ಅಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಶಾಂತಚಿತ್ತವಾದ ಬುದ್ಧನ ದೇವಾಯಗಳನ್ನು ಕಂಡು ಖುಷಿಯಾಯಿತು. ತಮಿಳುನಾಡು ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.

ಗೌತಮ್ ಮೌರ್ಯ, ಪ್ರವಾಸಿಗ, ಚಾಮರಾಜನಗರ