ಚಿತ್ರದುರ್ಗ: ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನದಡಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳ ಸ್ವಚ್ಛತೆಗೆ ಅಗತ್ಯ ಕಾರ‌್ಯ ಕ್ರ ಮ ಆಯೋಜಿಸುವಂತೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಅಭಿಯಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ,ಪ್ರವಾಸಿ ತಾಣಗಳು ದೇಶ,ರಾಜ್ಯವನ್ನು ಪ್ರತಿನಿಧಿಸುತ್ತವೆ. ದೇಶ,ವಿದೇಶಿ ಪ್ರವಾಸಿಗರು ಈ ತಾಣಗಳಿಗೆ ಬಂದಾಗ, ಸ್ವಚ್ಛ ವಾತಾವರಣದ ಅನುಭವ,ಅಗತ್ಯ ಮಾಹಿತಿ ದೊರಕುವಂತಿರಬೇಕು.
ಈ ನಿಟ್ಟಿನಲ್ಲಿ ಅಭಿಯಾನದಡಿ ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ ಪ್ರವಾಸಿ ತಾಣಗಳಲ್ಲಿ ವಿವಿಧ ಇಲಾಖೆಗಳು, ಸಾರ್ವಜನಿಕ ರು,ಸಂಘ ಸಂಸ್ಥೆಗಳು,ಸಮುದಾಯದ ಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನ ಕಾರ‌್ಯಕ್ರಮ ರೂಪಿಸಬೇಕು.ಚಿತ್ರದುರ್ಗದ ಕೋಟೆ, ಚಂದ್ರವಳ್ಳಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಅಭಿಯಾನದಡಿ ಸ್ವಚ್ಛವಾಗಬೇಕೆಂದರು.
ನಗರ,ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿರುವ ಖಾಲಿ ನಿವೇಶನಗಳು ಕಸ ಸಂಗ್ರಹಿಸುವ ತಾಣಗಳಾತ್ತಿದ್ದು,ಇದಕ್ಕೆ ಕಡಿವಾಣ ಅಗತ್ಯ. ಖಾಲಿ ನಿವೇಶನದಲ್ಲಿ ಕಸದ ರಾಶಿ ಕಂಡುಬರುತ್ತಿದ್ದು,ಸ್ವಚ್ಛತೆಗೆ ತೀವ್ರ ಸಮಸ್ಯೆಯಾಗುತ್ತದೆ. ಇಂತಹ ಸ್ಥಳಗಳಲ್ಲಿ ವಿಷಕಾರಿ ಜಂತುಗಳಿಂದ ಜನರು ತೊಂದರೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಖಾಲಿ ನಿವೇಶನಗಳ ಸ್ವಚ್ಛತೆ ಮಾಲೀಕರ ಜವಾಬ್ದಾರಿ. ಮಾಲೀಕರು ಸ್ವಚ್ಛಗೊಳಿಸದಿದ್ದರೆ,ಸ್ಥಳೀಯ ಸಂಸ್ಥೆಯಿಂದಲೇ ಸ್ವಚ್ಛಗೊಳಿಸಿ, ಕಾಯ್ದೆ ಅನುಸಾರ ಮಾಲೀಕರ ವಿರುದ್ಧ ಕ್ರಮ ಕೈಗೊಂಡು,ದಂಡ ಹಾಗೂ ಸ್ವಚ್ಛತೆಯ ವೆಚ್ಚ ವಸೂಲಿಗೆ ಸೂಚಿಸಿದರು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೆಲವೆಡೆ ಅವೈಜ್ಞಾನಿವಾಗಿ ಚರಂಡಿ ನಿರ್ಮಿಸಿರುವುದರಿಂದ,ನೀರು ಸರಾಗವಾಗಿ ಹರಿದುಹೋಗದೆ, ಮಳೆ ನೀರು,ತ್ಯಾಜ್ಯರಸ್ತೆ ಮೇಲೆಯೇ ನಿಂತು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ. ನಗರದ ಎಲ್ಲ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಕೆಲಸವಾಗಬೇಕು.
ಗ್ರಾಮಗಳಲ್ಲೂ ಗ್ರಾಪಂಗಳು ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.ನಮ್ಮ ಗ್ರಾಮ,ನಮ್ಮ ಬೀದಿ ಎಂಬ ಮನೋಭಾವ ಜನರಲ್ಲಿ ಬರಬೇಕು,ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು, ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಮಹತ್ವದೆಡೆ ಅರಿವು ಮೂಡಿಸಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು,ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸಬೇಕೆಂದು ಎಡಿಸಿ ತಾಕೀತು ಮಾಡಿದರು.
ಜಿಲ್ಲೆ ಎಲ್ಲ ಪ್ರಾಥಮಿಕ,ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನಿಯ ಮಾನುಸಾರ ವೈದ್ಯಕೀಯ ತ್ಯಾಜ್ಯ,ಅವಧಿ ಮೀರಿದ ಔಷಧಗಳನ್ನು ವಿಲೇವಾರಿ ಮಾಡ ಬೇಕು.ಆಸ್ಪತ್ರೆಗಳ ಆವರಣವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು,ಸಾಧ್ಯವಾದಷ್ಟು ಗಿಡಗಳನ್ನು ನೆಟ್ಟು ಉತ್ತಮ ಪರಿಸರ ಕಾಯ್ದು ಕೊಳ್ಳಬೇಕೆಂದರು. ಮಹೇಂದ್ರಕುಮಾರ್,ಡಿಡಿಪಿಐ ಎಂ. ಆರ್.ಮಂಜುನಾಥ್,ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಶಿಕುಮಾರ್,ವಾರ್ತಾಧಿಕಾರಿ ತುಕಾರಾಂರಾವ್ ಮತ್ತಿತರರು ಇದ್ದರು.