ಗುಂಡ್ಲುಪೇಟೆ: ತಾಲೂಕು ಪ್ರವಾಸಿಗರ ಸ್ವರ್ಗ. ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಹಿರಿಮೆಯನ್ನು ಹೆಚ್ಚಿಸಬೇಕಾಗಿದೆ ಎಂದು ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೆಳನ ಅಧ್ಯಕ್ಷ ಗು,ಚಿ ರಮೇಶ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಬಂಡೀಪುರ ಅರಣ್ಯ ಒಳಗೊಂಡಿದ್ದು, ಪ್ರಾಣಿ ಪಕ್ಷಿಗಳ ತವರೂರು ಹಿಮವದ್ ಗೋಪಾಲಸ್ವಾಮಿ ಬೆಟ್ಡವನ್ನು ಹೊಂದಿದೆ. ವಿಜಯನಾರಾಯಣಸ್ವಾಮಿ ದೇವಾಲಯ, ಲಕ್ಷ್ಮೀ ವರದರಾಜ ದೇವಾಲಯ, ಚೆಲುವರಾಯಸ್ವಾಮಿ, ಸ್ಕಂದಗುರಿ ಪಾರ್ವತಿ- ಪರಮೇಶ್ವರ, ಓಂಕಾರ ಸಿದ್ದೇಶ್ವರ, ನಾಗಲಿಂಗೇಶ್ವರ ಗುಹೆ, ಅರಣ್ಯದೊಳಗಿರುವ ಪಾರ್ವತಾಂಬೆ ಸನ್ನಿಧಿ, ಪ್ರವಾಸಿಗರ ಪಾಲಿಗೆ ಸ್ವರ್ಗದಂತಿವೆ ಎಂದು ತಿಳಿಸಿದರು.
ಗುಂಡ್ಲುಪೇಟೆಯ ಶಾಸಕಿಯಾಗಿದ್ದ ಕೆ,ಎಸ್ ನಾಗರತ್ನಮ್ಮ ಪ್ರಭಾವಿ ಮಹಿಳೆಯಾಗಿದ್ದರು. ಸಚಿವೆ, ಸ್ಪೀಕರ್ ಅಗಿ ಜನಪ್ರಿಯರಾದರು, ಶಾಸಕರಾಗಿದ್ದ ಶಿವರುದ್ರಪ್ಪ, ದಿ.ಮಹದೇವಪ್ರಸಾದ್ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ನಜೀರ್‌ಸಾಬ್ ನೀರ್ ಸಾಬ್ ಎಂದು ಖ್ಯಾತಿ ಪಡೆದಿದ್ದರು. ಮಾಜಿ ಶಾಸಕಿ ಗೀತಾ ಮಹದೇವಪ್ರಸಾದ್, ಶಾಸಕ ನಿರಂಜನ್‌ಕುಮಾರ್ ಮತ್ತಿತರರು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ತಾಲೂಕು ಮಠ, ಮಂದಿರ, ಚರ್ಚ್, ಮಸೀದಿ, ಜೈನರ ಬಸದಿಗಳಿಂದ ಕೂಡಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಸಾಪ ಜಿಲ್ಲಾಧ್ಯಕ್ಷ ಶೈಲಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕೇರಳದವರಿಗೆ ಭೂಮಿ ಮಾರಾಟ ಮಾಡಿ. ನಾವು ಕೂಲಿ ಕಾರ್ಮಿಕರಾಗುತಿದ್ದೇವೆ. ಸರ್ಕಾರಿ ನೌಕರರು ಅರ್ಧ ದಿನ ಪ್ರತಿಭಟನೆ ನಡೆಸಿದರೆ ಸಂಬಳ ಹೆಚ್ಚಳ ಮಾಡುವ ಸರ್ಕಾರ ಅರಿಶಿಣಕ್ಕೆ ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ಟೀಕಿಸಿದರು.
ಲೇಖಕ ನಾಗಣ್ಣ ಮಾತನಾಡಿ, ಮನುಷ್ಯನಿಗೆ ಬದುಕಲು ಆಹಾರದ ಜತೆಗೆ ಸಾಹಿತ್ಯ, ಶಿಲ್ಪಕಲೆ, ಸಂಗೀತ, ಚಿತ್ರಕಲೆ ಅವಶ್ಯಕತೆ ಇದೆ. ಪಂಪ, ರನ್ನ, ಜನ್ನ, ದಾಸರು, ವಚನಕಾರರನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು. ಸಾಹಿತಿಗಳಾದ ಜಿ.ಜಿ. ಮಂಜುನಾಥ್, ಮಲೆಯೂರು ಗುರುಸ್ವಾಮಿ ಅವರ ಕೊಡುಗೆಯನ್ನು ಸ್ಮರಿಸಿದರು.
ಮೂಡಗೂರು ಮಠಾಧ್ಯಕ್ಷ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ, ಸಾಹಿತಿಗಳಾದ ಜಿ,ಜಿ ಮಂಜುನಾಥ್, ನಿಕಟ ಪೂರ್ವ ಸಮ್ಮೇಳನದ ಸರ್ವಾಧ್ಯಕ್ಷ ನಾಗಭೂಷಣ್ ಬಸವಾಪುರ, ತಾಲೂಕು ಕಸಾಪ ಅಧ್ಯಕ್ಷ ಜಗತ್‌ಪ್ರಸಾದ್, ಮಾಜಿ ಅಧ್ಯಕ್ಷರಾದ ಪಿ.ಸಿ.ರಾಜಶೇಖರ್, ವಿ.ನಾ. ಚಿದಾನಂದ, ಅಂಕಪ್ಪ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕಿ ಲಕ್ಷ್ಮಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಇತರರು ಇದ್ದರು. ಸರ್ವಾಧ್ಯಕ್ಷ ಗು.ಚಿ.ರಮೇಶ್ ಅವರನ್ನು ಪುರಸಭೆ ಆವರಣದಿಂದ ಕಾರ್ಯಕ್ರಮ ಸ್ಥಳಕ್ಕೆ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.