ಕೊಳ್ಳೇಗಾಲ: ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಗಮನ ಸೆಳೆದಿದ್ದಾರೆ.
ಕ್ಷೇತ ವ್ಯಾಪ್ತಿಯಲ್ಲಿ ಯಾವ ಯಾವ ಸ್ಥಳಗಳನ್ನು ಪ್ರವಾಸಿ ತಾಣಗಳೆಂದು ಗುರುತಿಸಲಾಗಿದೆ. ಈ ಪ್ರವಾಸಿ ತಾಣಗಳಿಗೆ ಇದುವರೆಗೆ ಎಷ್ಟೂ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಅಧಿವೇಶನದಲ್ಲಿ ಎ.ಆರ್.ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ. ಹೊಗೇನಕಲ್ ಫಾಲ್ಸ್, ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದೆ. ಈವರೆಗೆ ಈ ಪ್ರವಾಸಿ ತಾಣಗಳ ಅಭಿವೃದ್ಧಿ ಕಾಮಗಾರಿಗಳನ್ನು ಅಂದಾಜು 980 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. 867 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವರು ಶಾಸಕರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಬಿಳಿಗಿರಿರಂಗನ ಬೆಟ್ಟ, ಕೊಳ್ಳೇಗಾಲದ ಮರಡಿಗುಡ್ಡ, ಹೊಂಗನೂರಿನ ಹಿರಿಕೆರೆಯ ಕುಂತಿಕಲ್ಲು, ಅನೇಕಲ್ಲಿ ಪ್ರದೇಶ, ಬೆಲ್ಲವತ್ತ ಸಾನೆಯ ಕೆರೆಯ ಪ್ರದೇಶಗಳು ಪ್ರವಾಸಿ ತಾಣಗಳಾಗಿ ರೂಪುಗೊಳ್ಳುತ್ತಿರುವುದು ಗಮನದಲ್ಲಿದೆಯೇ, ಬಂದಿದ್ದಲ್ಲಿ ಅಭಿವೃದ್ಧಿಗೆ ಸರ್ಕಾರ ಏನು ಕ್ರಮವಹಿಸಿದೆ ಎಂಬ ಎ.ಆರ್.ಕೃಷ್ಣಮೂರ್ತಿ ಪ್ರಶ್ನೆಗೆ, ಬಿಳಿಗಿರಿರಂಗನ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಗುರುತಿಸಲಾಗಿದೆ. ಈ ಸ್ಥಳದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುದಾನ ವಿವರವನ್ನು ಅನುಬಂಧ-2ರಲ್ಲಿ ಒದಗಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಕ್ಷೇತ್ರದ ರೇಷ್ಮೆ ಚಟುವಟಿಕೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಿರುಪಯುಕ್ತವಾಗಿರುವ ರೇಷ್ಮೆ ಇಲಾಖೆಯ ಕಟ್ಟಡಗಳ ಬಳಕೆಗೆ ಕ್ರಮ ಏನೆಂದು ಪ್ರಶ್ನೆ ಎತ್ತಿದ್ದಾರೆ. ಕ್ಷೇತ್ರದಲ್ಲಿರುವ 66 ರೇಷ್ಮೆ ಇಲಾಖೆ ಕಟ್ಟಡಗಳ ಪೈಕಿ 24 ಕಟ್ಟಡಗಳನ್ನು ಬಳಕೆ ಮಾಡಲಾಗುತ್ತಿದೆ. 42 ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಯೋಗ್ಯವಲ್ಲದ ಕಟ್ಟಡವನ್ನು ನಿಯಮಾನುಸಾರ ಲೋಕೋಪಯೋಗಿ ಇಲಾಖೆ ವತಿಯಿಂದ ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರು ಉತ್ತರಿಸಿದ್ದಾರೆ.
ಸರ್ಕಾರಿ ರೇಷ್ಮೆ ಫಿಲೇಚರ್‌ಗಳ ಉತ್ತೇಜನಕ್ಕೆ ಏನು ಕ್ರಮವಹಿಸಲಾಗಿದೆ ಎಂಬ ಶಾಸಕರ ಪ್ರಶ್ನೆಗೆ, ಸಚಿವರು ಕ್ಷೇತ್ರದ ರೇಷ್ಮೆ ಕಾರ್ಖಾನೆಗಳು ನಷ್ಟದಲ್ಲಿ ನಡೆಯುತ್ತಿದ್ದ ಕಾರಣ 2013ರ ಅಕ್ಟೋಬರ್ 10 ಮತ್ತು ನಂತರ ದಿನಗಳಂದು ಇಂಡಸ್ಟ್ರಿಯಲ್ ಡಿಸ್‌ಪ್ಯೂಟ್ಸ್ ಆಕ್ಟ್ 1947 ಅನ್ವಯ ಲೇ ಆಫ್ ಘೋಷಣೆ ಆಗಿರುತ್ತದೆ. ಶಿಥಿಲವಾಗಿರುವ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮವಹಿಸಿರುವುದಿಲ್ಲ. 2019-20ರ ಆಯವ್ಯಯದಲ್ಲಿ ಸಂತೇಮರಳ್ಳಿ ರೇಷ್ಮೆ ಕಾರ್ಖಾನೆಯಲ್ಲಿ ಹೊಸ ತಾಂತ್ರಿಕತೆಯ ರೀಲಿಂಗ್ ಯಂತ್ರೋಪಕರಣಗಳನ್ನು ಅಳವಡಿಸಿ ಆ ಭಾಗದ ಯುವಕರಿಗೆ ನೂಲು ಬಿಚ್ಚಣಿಕೆ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. 10 ಲಕ್ಷ ರೂ.ವೆಚ್ಚದಲ್ಲಿ ಇದರ ಪ್ರಾರಂಭಿಕ ಸಿವಿಲ್ ಕಾಮಗಾರಿಯಾಗಿ ಕಾರ್ಖಾನೆ ಸುತ್ತುಗೋಡೆ ನಿರ್ಮಾಣ ಮತ್ತು ಶೌಚಗೃಹ ನವೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಉತ್ತರಿಸಿದರು. ಅಲ್ಲದೆ, ಶಾಸಕರು ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಚಾಕಿ ಸಾಕಣೆ ಮತ್ತೆ ಆರಂಭಿಸಲು ಇರುವ ತೊಡಕುಗಳ ನಿವಾರಣೆ ಹಾಗೂ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಿಂದ ಈವರೆಗೆ ರೇಷ್ಮೆ ನೂಲು ಬಿಚ್ಚ್ಚಣಿಕೆದಾರರಿಂದ ರೇಷ್ಮೆಯನ್ನು ಖರೀದಿಸಲಾಗಿದೆಯೇ, ಯಾವ ದರದಲ್ಲಿ ರೇಷ್ಮೆ ಖರೀದಿಸಿದ್ದೀರಿ ಎಂಬ ಶಾಸಕರ ಪ್ರಶ್ನೆಗೆ, ಸಚಿವರು ಉತ್ತರಿಸಿದ್ದಾರೆ.