ಕೆಂಭಾವಿ: ಕೇAದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ ಎಂಬ ಯೋಜನೆ ಅಡಿ ಜಿಲ್ಲಾಡಳಿತ ಗುರುತಿಸಿದ ಜಿಲ್ಲೆಯ ಹಲವು ಪ್ರವಾಸಿ ತಾಣಗಳಲ್ಲಿ ಪಟ್ಟಣದ ಭೋಗೇಶ್ವರ ದೇವಸ್ಥಾನ ಮತ್ತು ಮುದನೂರಿನ ದೇವರ ದಾಸಿಮಯ್ಯ ದೇವಸ್ಥಾನ ಇಲ್ಲದಿರುವುದು ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ.
ಆದ್ಯ ವಚನಕಾರನೆಂದೇ ಖ್ಯಾತಿ ಗಳಿಸಿದ ಮುದನೂರಿನ ದೇವರ ದಾಸಿಮಯ್ಯ ಮತ್ತು ಕೆಂಭಾವಿ ಭೋಗಣ್ಣನ ದೇವಸ್ಥಾನ ಒಂದಾಗಿವೆ. ಸಪ್ತ ತೀರ್ಥಗಳನ್ನು ಒಳಗೊಂಡ ದಾಸಿಮಯ್ಯ ಹಾಗೂ ಸುತ್ತಲೂ ನೀರು ನಟ್ಟುನಡುವೆ ಇರುವ ಭೋಗಣ್ಣನ ದೇವಸ್ಥಾನ ನೋಡಲು ಭಕ್ತರ ದಂಡೇ ಆಗಮಿಸುತ್ತಿದೆ.
ಜಿಲ್ಲಾಡಳಿತ ಶನಿವಾರ ಹೊರಡಿಸುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇವೆರಡೂ ದೇವಸ್ಥಾನ ಕೈಬಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೇಂದ್ರದ ನೂತನ ಯೋಜನೆಯಡಿ ಪ್ರವಾಸಿಗರು ಆನ್‌ಲೈನ್ ಮೂಲಕ ವೋಟ್ ಮಾಡಿ ಅಭಿವೃದ್ಧಿಗೆ ಮುನ್ನುಡಿ ಬರೆಯುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತಿಹಾಸಪ್ರಸಿದ್ಧ ದಾಸಿಮಯ್ಯ ಮತ್ತು ಕೆಂಭಾವಿ ಭೋಗೇಶ್ವರ ದೇವಸ್ಥಾನಗಳು ಮೊದಲೇ ಅಭಿವೃದ್ಧಿಯಿಂದ ವಂಚಿತವಾಗಿವೆ. ಸ್ಥಳೀಯರು ಸಾಕಷ್ಟು ಪ್ರಯತ್ನ ಪಟ್ಟರೂ ಅನುದಾನ ಕೊರತೆಯಿಂದ ಅಭಿವೃದ್ಧಿ ಶೂನ್ಯವಾಗಿದೆ. ಜಿಲ್ಲಾ ಪ್ರವಾಸೋದ್ಯಮ ಪಟ್ಟಿಯಲ್ಲಿ ಈ ದೇವಸ್ಥಾನಗಳು ಇವೆಯೋ ಅಥವಾ ಇಲ್ಲವೋ ಎಂಬ ಅನುಮಾನ ಜನತೆಗೆ ಕಾಡುತ್ತಿದ್ದು, ಜಿಲ್ಲಾಡಳಿತವೇ ಉತ್ತರ ನೀಡಬೇಕಿದೆ.