ಜಿಲ್ಲೆ

ಪ್ರವಾಸಿ ತಾಣ ಯಾಣಕ್ಕೆ ಆಧುನಿಕತೆ ಸ್ಪರ್ಶ

ಕುಮಟಾ: ಯಾಣಕ್ಕೆ ಆಧುನಿಕತೆಯ ಸ್ಪರ್ಶ ನೀಡಿ, ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಯಾಣದಲ್ಲಿ ಗುಡ್ಡ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಭಾನುವಾರ ಸುಮಾರು 3 ಕಿಮೀ ಕಾಲ್ನಡಿಗೆಯಲ್ಲಿ ಸಾಗಿ ಯಾಣ ಕ್ಷೇತ್ರಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು. ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಕಳೆದ ಬಾರಿ ಗುಡ್ಡ ಕುಸಿತದಿಂದ ಹಾನಿಯಾಗಿದ್ದು, ತುರ್ತು ರಕ್ಷಣಾ ಕಾರ್ಯಗಳಿಗೆ 50 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 10 ಲಕ್ಷ ರೂ. ಬೇಡಿಕೆ ಸಲ್ಲಿಸಲಾಗಿದೆ. ಈ ಬಾರಿ ಮತ್ತೆ ಗುಡ್ಡ ಕುಸಿತವಾಗಿ ಹಾನಿಯಾಗಿದೆ.

ಶಿರಸಿ ಹಾಗೂ ಅಂಕೋಲಾ ಭಾಗದಿಂದ ಶಿಖರಕ್ಕೆ ಬರುವ ರಸ್ತೆ ಮೇಲೆ 20 ಅಡಿಗಳಷ್ಟು ಮಣ್ಣು ತುಂಬಿ ತೀರಾ ಆಳದವರೆಗೂ ಕುಸಿತವಾಗಿದೆ. ಕುಮಟಾದಿಂದ ಹೋಗುವ ಮಾರ್ಗವೂ ಭಾರಿ ಪ್ರಮಾಣದ ಮಣ್ಣಿನಿಂದ ಮುಚ್ಚಿಹೋಗಿದೆ. ಇಲ್ಲಿಯ ವಾತಾವರಣವನ್ನು ಯಥಾಸ್ಥಿತಿಗೆ ತರಲು ಕನಿಷ್ಠ 2 ಕೋಟಿ ರೂ.ಗಳಾದರೂ ಬೇಕು. ನೆರೆ ಪರಿಹಾರದಡಿ ಅಥವಾ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆಯಾಗಬೇಕಿದೆ ಎಂದು ದಿನಕರ ಶೆಟ್ಟಿ ಹೇಳಿದರು. ಸ್ಥಳೀಯ ಮುಖಂಡ ದೀಪಯ್ಯ ನಾಯ್ಕ ಪ್ರಾಸ್ತವಿಕವಾಗಿ ಮಾತನಾಡಿದರು. ಜಿಪಂ ಸದಸ್ಯ ಗಜು ಪೈ ಸ್ವಾಗತಿಸಿದರು. ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಕತಗಾಲ ವಲಯ ಅರಣ್ಯಾಧಿಕಾರಿ ಪ್ರಭಾಕರ ಕಾಗಿನೆಲೆ, ಟಿ.ಎಸ್.ಗಾಣಿಗೇರ್, ಬಿ.ಎನ್.ಬಂಕಾಪುರ, ಉಪ ತಹಶೀಲ್ದಾರ ಬಿ.ಆರ್.ನಾಯ್ಕ, ಭೈರವೇಶ್ವರ ಭಟ್ಟ, ಉಮೇಶ ಮರಾಠಿ ಇದ್ದರು.