ಜಿಲ್ಲೆ

ಪ್ರಯೋಗ ಶಾಲೆಯಾದ ಕೃಷಿ ಭೂಮಿ

ಚಾಮರಾಜನಗರ: ‘ರಾಸಾಯನಿಕ ಕೃಷಿ ಪದ್ಧತಿ ನಿಧಾನವಾಗಿ ಮಣ್ಣಿನ ಲವತ್ತತೆ ಕಡಿಮೆ ಮಾಡಿ ಇಳುವರಿಯನ್ನೂ ಕುಗ್ಗಿಸುತ್ತದೆ. ಅದೇ ಸಾವಯವ ಕೃಷಿ ಪದ್ಧತಿ ನಿಧಾನವಾಗಿ ಮಣ್ಣಿನ ಲವತ್ತೆಯನ್ನು ಹೆಚ್ಚಿಸಿ ಇಳುವರಿಯನ್ನು ಅಧಿಕಗೊಳಿಸುತ್ತದೆ.

ಇದು ತಾಲೂಕಿನ ಮುತ್ತಿಗೆ ಗ್ರಾಮದ ಸಾವಯವ ಕೃಷಿಕ ಮಲ್ಲೇಶ್‌ಗೌಡರ ನುಡಿಗಳು. ಸಾಂಪ್ರದಾಯಿಕ ಕೃಷಿಗೆ ಭವಿಷ್ಯವಿದೆ ಎಂದು ನಂಬಿರುವ ರೈತ ಮತ್ತು ಎಲ್‌ಐಸಿ ಏಜೆಂಟ್ ಮಲ್ಲೇಶ್‌ಗೌಡ ಎಂ.ಎ. ಓದಿದ್ದರೂ ಕೃಷಿ ಕಡೆಗೆ ಒಲವು ಬೆಳೆಸಿಕೊಂಡವರು. ಕಾಲೇಜು ಓದುವಾಗಲೇ ಕೃಷಿ ಆರಂಭಿಸಿ ನೀರಿನ ಅಭಾವ ಉಂಟಾದಾಗ ವಿಮುಖರಾಗಿದ್ದರು. ಕಳೆದ 5 ವರ್ಷಗಳಿಂದ ಮತ್ತೆ ವ್ಯವಸಾಯಕ್ಕಿಳಿದಿರುವ ಇವರು ಸಾವಯವ ವಿಧಾನವನ್ನು ಅನುಸರಿಸುತ್ತಿದ್ದಾರೆ. ಸುಭಾಷ್ ಪಾಳೇಕರ್ ಅವರಿಂದ ಸ್ಫೂರ್ತಿ ಪಡೆದು ಸಾವಯವ ಪದ್ಧತಿಯಲ್ಲಿ ಕೃಷಿಯತ್ತ ಚಿತ್ತ ನೆಟ್ಟರು. ಇವರಿಗೆ ಇಕ್ರಾ ಸಂಸ್ಥೆಯ ಶಿವಲಿಂಗೇಗೌಡರ ಮಾರ್ಗದರ್ಶನ ದೊರೆಯಿತು. ಪರಿಣಾಮ ಜಿಲ್ಲೆಯಲ್ಲಿ ಪ್ರಗತಿ ಪರ ಮಾದರಿ ಕೃಷಿಕನಾಗಿದ್ದಾರೆ.

ರೈತ ಮಲ್ಲೇಶ್‌ಗೌಡಗೆ ಮುತ್ತಿಗೆ ಗ್ರಾಮದಲ್ಲಿ 3 ಎಕರೆ ಸ್ವಂತ ಜಮೀನಿನಲ್ಲಿ ಕಬ್ಬು, ಗುತ್ತಿಗೆ ಪಡೆದಿರುವ 1.12 ಎಕರೆಯಲ್ಲಿ ಬಾಳೆ ಹಾಕಿದ್ದಾರೆ. ಉತ್ತುವಳ್ಳಿ ಗ್ರಾಮದಲ್ಲಿ ಅಕ್ಕನ ಜಮೀನು 35 ಗುಂಟೆಯಲ್ಲಿ ಬಾಳೆ, ಸಂಬಂಧಿಕರ ಜಮೀನು 35 ಗುಂಟೆಯಲ್ಲಿ ನೇಂದ್ರ ಬಾಳೆ, ಬೀನ್ಸ್, ಮೆಣಸಿಕಾಯಿ, ಈರುಳ್ಳಿ ಹಾಕಿದ್ದಾರೆ. ಇದಿಷ್ಟೂ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಎಲ್ಲ ಜಮೀನುಗಳಲ್ಲೂ ಬೋರ್‌ವೆಲ್ ಸೌಲಭ್ಯವಿದೆ. ಹನಿ ನೀರಾವರಿ ಮೂಲಕ ನೀರು ಹಾಯಿಸುತ್ತಿದ್ದಾರೆ. ಸರ್ಕಾರದಿಂದ ಹನಿ ನೀರಾವರಿ ಸೌಲಭ್ಯವನ್ನು ಮಾತ್ರ ಪಡೆದುಕೊಂಡಿದ್ದಾರೆ. ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಲಕ್ಷ ರೂ.ಗಳ ಲೆಕ್ಕದಲ್ಲಿ ಆದಾಯವೂ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಸಾಯನಿಕ ಪದ್ಧತಿಯ ಬದಲು ಸಾವಯವ ವಿಧಾನದಲ್ಲಿ ರೈತರ ಭವಿಷ್ಯ ಅಡಗಿದೆ. ಇದು ಮಣ್ಣಿನ ಲವತ್ತತೆಯನ್ನು ಉಳಿಸುತ್ತದೆ. ರೈತರ ಭವಿಷ್ಯವನ್ನು ಬೆಳಗುತ್ತದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಇವರ ಜಮೀನಿನಲ್ಲಿ ಇಕ್ರಾ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜಿಸಿ 50ಕ್ಕೂ ಹೆಚ್ಚು ರೈತರನ್ನು ಕರೆಸಿ ಬೆಳೆ ಹೇಗೆ ಬೆಳೆಯುತ್ತಿದ್ದಾರೆ ಎಂದು ಪ್ರಾತ್ಯಕ್ಷಿಕೆ ನೀಡಿದ್ದರು.

ಪ್ರಯೋಗ ಶಾಲೆ: ಸಾವಯವ ಕೃಷಿ ಮಾಡಲು ಬಯಸುವ ಯುವ ರೈತರಿಗೆ ಮಲ್ಲೇಶ್‌ಗೌಡರ ಜಮೀನು ಪಾಠ ಶಾಲೆಯಾಗಿದೆ. ಏಕೆಂದರೆ ಅವರು ಕೃಷಿ ಭೂಮಿಯನ್ನು ಪ್ರಯೋಗ ಶಾಲೆ ಮಾಡಿಕೊಂಡು ಯಶಸ್ಸು ಕಂಡಿದ್ದಾರೆ. ಸಣ್ಣ ಕಳೆಯನ್ನು ತೆಗೆಯುವುದನ್ನು ಬಿಟ್ಟರೆ ಉಳಿದಿದ್ದನ್ನೆಲ್ಲ ಅಲ್ಲೇ ಕೊಳೆಸಿ ಗೊಬ್ಬರ ಮಾಡುತ್ತಾರೆ. ಭೂಮಿ ಸಿದ್ಧ ಮಾಡುವ ಮೊದಲೇ ಸಾವಯವ ವಿಧಾನದಲ್ಲಿ ನಿಯಮಗಳನ್ನು ಅನುರಿಸಲು ಆರಂಭಿಸುತ್ತಾರೆ. ಬೆಳೆಗಳಿಗೆ ಸಕಾಲಕ್ಕೆ ರಾಸಾಯನಿಕರಹಿತ ದ್ರಾವಣಗಳನ್ನು ಸಿಂಪಡಿಸುತ್ತಾರೆ. ಸಾಕಿರುವ 4-5 ಮೇಕೆಗಳ ಗೊಬ್ಬರವನ್ನು ಬೆಳೆಗಳಿಗೆ ಹಾಕುತ್ತಿದ್ದಾರೆ. ಒಂದು ಹಸುವನ್ನೂ ಸಾಕಿದ್ದಾರೆ. ಜೀವಾಮೃತ ತಯಾರಿಸಿ ಬೆಳೆಗಳಿಗೆ ನೀಡುತ್ತಿದ್ದಾರೆ. ಕೃಷಿ ಇಲಾಖೆಯಿಂದ ಯಾವುದೇ ಸೌಲಭ್ಯಗಳನ್ನು ಪಡೆಯದೆ ಇದ್ದರೂ ಬೆಳೆಗಳಿಗೆ ಹಾಕಬಹುದಾದ ಸಾವಯವ ಪದಾರ್ಥಗಳನ್ನು ಪಡೆದುಕೊಳ್ಳುವುದರಲ್ಲಿ ಮುಂದಿದ್ದಾರೆ.

ಅಧ್ಯಯನ ಶೀಲ ರೈತ: ರೈತ ಮಲ್ಲೇಶ್‌ಗೌಡ ಅಧ್ಯಯನಶೀಲರು. ಇಕ್ರಾ ಸಂಸ್ಥೆ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನೀಡುವ ಸಲಹೆ, ಮಾರ್ಗದರ್ಶನಗಳನ್ನು ಪಡೆದುಕೊಂಡು ವ್ಯವಸಾಯದಲ್ಲಿ ಅಳವಡಿಕೆ ಮಾಡಿಕೊಂಡಿದ್ದಾರೆ. ಅಲ್ಲದೇ, ಬೇರೆ ಜಿಲ್ಲೆಗಳಲ್ಲಿ ಇರುವ ಪ್ರಗತಿ ಪರ ರೈತರ ಜಮೀನುಗಳಿಗೆ ಭೇಟಿ ನೀಡಿ ಕಲಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಸಾವಯವ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಮಗನಿಗೆ ತಾಯಿ ಸಾಥ್: ಮಲ್ಲೇಶ್‌ಗೌಡ ತಂದೆ ದಿವಂಗತ ಮಾದೇಗೌಡ ಮತ್ತು ತಾಯಿ ಸಿದ್ದಮ್ಮ ಕೃಷಿಕರು. ಪ್ರಸ್ತುತ 80 ವರ್ಷದ ತಾಯಿ ಸಿದ್ದಮ್ಮ ಕೃಷಿ ಕಾರ್ಯದಲ್ಲಿ ಮಗನಿಗೆ ಸಾಥ್ ನೀಡುತ್ತಿದ್ದಾರೆ. ಕ್ರಮಬದ್ಧ ದಿನಚರಿ ಅನುಸರಿಸುವ ಮಲ್ಲೇಶ್‌ಗೌಡ ಮುತ್ತಿಗೆ ಗ್ರಾಮದಲ್ಲಿರುವ ಜಮೀನಿಗೆ ತನ್ನ ತಾಯಿಯನ್ನು ಬಿಟ್ಟು ಬಂದು ಉಳಿದ ಕಡೆ ಇರುವ ಜಮೀನುಗಳು, ಎಲ್‌ಐಸಿ ಕೆಲಸಗಳನ್ನು ಮಾಡುತ್ತಾರೆ.

ಸಾವಯವ ಕೃಷಿ ಪದ್ಧತಿಯನ್ನು ನಾನು ಮಾತ್ರವಲ್ಲ, ನಮ್ಮ ಮುತ್ತಿಗೆ ಗ್ರಾಮ ಪೂರ್ತಿ ಅನುಸರಿಸಬೇಕೆಂಬುದು ನನ್ನ ಕನಸು. ರೈತರಿಗೆ ಸಾವಯವ ಕೃಷಿ ಮಹತ್ವವನ್ನು ತಿಳಿಸಿಕೊಡುತ್ತಲೇ ಇದ್ದೇನೆ. ರಾಸಾಯನಿಕ ಬಳಸಿ ಭೂಮಿಯನ್ನು ಹಾಳು ಮಾಡಿಕೊಳ್ಳುವ ಬದಲು ಸಾಂಪ್ರದಾಯಿಕ ವಿಧಾನದಲ್ಲಿ ಮಣ್ಣಿನ ಲವತ್ತೆ ಉಳಿಸಿಕೊಳ್ಳಬೇಕು. ಮಣ್ಣು ಲವತ್ತಾಗಿದ್ದರೆ ಬೆಳೆಗಳಿಗೆ ರೋಗ ಬರುವುದಿಲ್ಲ. ಉತ್ತಮ ಇಳುವರಿಯೂ ಸಿಗುತ್ತದೆ. ಲಾಭವನ್ನೂ ಗಳಿಸಬಹುದು. ಇದರಲ್ಲಿ ರೈತರಿಗೆ ಭವಿಷ್ಯವಿದೆ. ಮಲ್ಲೇಶ್‌ಗೌಡ, ಸಾವಯವ ಕೃಷಿಕ, ಮುತ್ತಿಗೆ ಗ್ರಾಮ, ಚಾಮರಾಜನಗರ