ಚಳ್ಳಕೆರೆ: ಸರ್ಕಾರಿ ಬಸ್‌ನಲ್ಲಿ ದುಡ್ಡು ಕೊಟ್ಟರೂ ಸೀಟ್ ಸಿಗುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಗಲಾಟೆ ಮಾಡಿದ್ದರಿಂದ ಚಿತ್ರದುರ್ಗಕ್ಕೆ ತೆರಳಬೇಕಿದ್ದ ಬಸ್ ಅನ್ನು ಚಾಲಕ ಮರಳಿ ನಿಲ್ದಾಣಕ್ಕೆ ತಂದು ನಿಲ್ಲಿಸಿದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.
ಘಟನೆ ವಿವರ: ಪಾವಗಡದಿಂದ ಪುರ‌್ಲೆಹಳ್ಳಿ ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಬಸ್ಸನ್ನು ಪುರ‌್ಲೆಹಳ್ಳಿ ಗ್ರಾಮದಲ್ಲಿ ಪ್ರಯಾಣಿಕ ಹತ್ತಿಕೊಂಡಿದ್ದಾನೆ. ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದಡಿ ಬಸ್ಸಿನ ತುಂಬಾ ತುಂಬಿಕೊಂಡಿದ್ದ ಮಹಿಳೆಯರನ್ನು ಕಂಡು ಕುಪಿತನಾದ ಪ್ರಯಾಣಿಕ, ದುಡ್ಡು ಕೊಟ್ಟರೂ ನಮಗೆ ಸೀಟು ಸಿಗುತ್ತಿಲ್ಲ. ಬಸ್ಸು ನಿಲ್ಲಿಸಿ ಒಬ್ಬ ಮಹಿಳೆಯನ್ನು ಕೆಳಗಿಸಿ ನನಗೆ ಸೀಟು ಕೊಡಿ ಎಂದು ಪುರ‌್ಲೆಹಳ್ಳಿ ಗ್ರಾಮದಿಂದ ಚಳ್ಳಕೆರೆ ತನಕ ಕಂಡಕ್ಟರ್ ಜತೆ ವಾದ ಮಾಡಿಕೊಂಡು ಬಂದಿದ್ದಾನೆ.
ಚಳ್ಳಕೆರೆ ನಗರದ ಸಾರಿಗೆ ಬಸ್ ನಿಲ್ದಾಣದಿಂದ ಚಿತ್ರದುರ್ಗಕ್ಕೆ ಬಸ್ಸು ಹೊರಟ ವೇಳೆ ಸೀಟು ಸಿಗದಿದ್ದಕ್ಕೆ ಮತ್ತಷ್ಟು ರೇಗಾಡಿದ ಪ್ರಯಾಣಿಕ ಸೀಟು ಕೊಡಿಸದಿದ್ದರೆ ಬಸ್ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾನೆ. ಇದರಿಂದ ವಿಚಲಿತನಾದ ಚಾಲಕ ಬಸ್ಸನ್ನು ಮರಳಿ ನಿಲ್ದಾಣಕ್ಕೆ ತಂದು ನಿಲ್ಲಿಸಿದ್ದಾನೆ. ಮಹಿಳೆಯರನ್ನು ಬಸ್ಸಿನಿಂದ ಕೆಳಗಿಳಿಸಲು ಬರುವುದಿಲ್ಲ ಎಂದು ಎಷ್ಟು ತಿಳಿ ಹೇಳಿದರೂ ಒಪ್ಪಿಕೊಳ್ಳದ ಆತ ವಾದ ಮುಂದುವರಿಸಿದ್ದಾನೆ. ಪೊಲೀಸ್ ಠಾಣೆಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ ಬಳಿಕ ಪ್ರಯಾಣಿಕ ಪಲಾಯನ ಮಾಡಿದ್ದಾನೆ.