ಜಿಲ್ಲೆ

ಪ್ರಯಾಣಿಕ ಹುಚ್ಚಾಟ ಆನೆಗಳಿಗೆ ಕಿರಿಕಿರಿ

ಗುಂಡ್ಲುಪೇಟೆ: ಬಂಡಿಪುರದ ಮದ್ದೂರು-ಮೂಲೆಹೊಳೆ ಮಾರ್ಗಮಧ್ಯೆ ವಾಹನ ಸವಾರರ ಹುಚ್ಚಾಟದಿಂದ ಕಾಡಾನೆಗಳು ರಸ್ತೆ ದಾಟಲು ಪ್ರಯಾಸಪಡುವಂತಾಗಿದೆ.
ಗುಂಡ್ಲುಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ದಿನವೂ ಇದೇ ಪ್ರಸಂಗ ಪುನರಾವರ್ತನೆ ಆಗುತ್ತಿದೆ. ರಸ್ತೆ ದಾಟಲೆಂದು ಆನೆಗಳು ಬಂದಾಗ ದೂರ ನಿಲ್ಲಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಇಲ್ಲದ ಜನರು ವಾಹನಗಳನ್ನು ನಿಲ್ಲಿಸಿ ಕೆಳಗಿಳಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಆನೆಗಳು ರಸ್ತೆಗೆ ಬಂದರೂ ದಾಟಲು ಹೋದವರು ಆನೆ ಘರ್ಜನೆಗೆ ಬೆದರಿ ವಾಪಸ್ಸಾಗುತ್ತಿದ್ದಾರೆ.
ಶುಕ್ರವಾರ ಕೂಡ ಜನರ ಹುಚ್ಚಾಟದಿಂದ ಕೆರಳಿದ ಆನೆಗಳು ರಸ್ತೆಯಲ್ಲಿ ನಿಂತಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇನ್ನಾದರೂ ಅರಣ್ಯ ಇಲಾಖೆ ರಸ್ತೆ ಗಸ್ತು ಹೆಚ್ಚಿಸಿ ಪ್ರವಾಸಿಗರ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ಹೆಚ್ಚಿಸಿ ಅನಧಿಕೃತ ವಾಹನ ನಿಲುಗಡೆ ಮಾಡುವ ಹಾಗೂ ವನ್ಯಜೀವಿಗಳಿಗೆ ಕಿರುಕುಳ ನೀಡುವ ಪ್ರವಾಸಿಗರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಸಿ.ರವೀಂದ್ರ, ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್.