ಜಿಲ್ಲೆ

ಪ್ರಮಾಣಪತ್ರಕ್ಕಾಗಿ 94 ಕಿ.ಮೀ.ಸೈಕಲ್ ಪ್ರಯಾಣ; ನಿಮ್ಮಕಾಯಲಪಲ್ಲಿಯಿಂದ ಬಾಗೇಪಲ್ಲಿಗೆ ಒಂದೇ ದಿನ ಹೋಗಿಬಂದ ನಾರಾಯಣಸ್ವಾಮಿ

ಚೇಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅಗತ್ಯವಿರುವ ಜಮೀನಿನ ಹಳೇ ಕ್ರಯ ಪತ್ರ ಪಡೆಯಲು ಇಲ್ಲೊಬ್ಬ 94 ಕಿ.ಮೀ ದೂರ ಸೈಕಲ್ ತುಳಿದಿದ್ದಾನೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾರಿಗೆ ಮತ್ತು ಖಾಸಗಿ ವಾಹನ ಸಂಚಾರ ಸ್ಥಗಿತಗೊಂಡಿರುವುದರಿಂದ ಚೇಳೂರು ಹೋಬಳಿ ನಿಮ್ಮಕಾಯಲಪಲ್ಲಿಯ ನಾರಾಯಣಸ್ವಾಮಿ ಸೈಕಲ್‌ನಲ್ಲಿ ಬಾಗೇಪಲ್ಲಿಗೆ ಹೋಗಿ ಪ್ರಮಾಣ ಪತ್ರ ಪಡೆದು ಬಂದಿದ್ದಾನೆ.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಳೇ ಕ್ರಯ ಪತ್ರ ಪಡೆದು ಕೋರ್ಟ್‌ಗೆ ನೀಡಬೇಕಾಗಿತ್ತು. ಇದಕ್ಕೆ ನಾರಾಯಣಸ್ವಾಮಿ ನಿಮ್ಮಕಾಯಲಪಲ್ಲಿಯಿಂದ ಚೇಳೂರಿಗೆ 5 ಕಿ.ಮೀ ಮತ್ತು ಚೇಳೂರಿನಿಂದ ಬಾಗೇಪಲ್ಲಿಗೆ 42 ಕಿ.ಮೀ ಸೈಕಲ್‌ನಲ್ಲಿಯೇ ತೆರಳಿ ವಾಪಸಾಗಿದ್ದಾನೆ.

ಬೆಳಗಿನ ಜಾವ 4ಕ್ಕೆ ಸೈಕಲ್‌ನಲ್ಲಿ ಊರಿಂದ ಹೊರಟು ಬೆಳಗ್ಗೆ 8ಕ್ಕೆ ಬಾಗೇಪಲ್ಲಿಗೆ ಬಂದು, ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕ್ರಯಪತ್ರ ಪಡೆದುಕೊಂಡಿದ್ದಾನೆ. ಬಳಿಕ ಬಾಗೇಪಲ್ಲಿ ಕೋಟ್‌ಗೆ ಹೋಗಿ, ಪ್ರಮಾಣಪತ್ರವನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಮತ್ತೆ ರಾತ್ರಿ 8 ಕ್ಕೆ ಸೈಕಲ್‌ನಲ್ಲಿ ಊರು ತಲುಪಿದ್ದಾನೆ.

ನಾರಾಯಣಸ್ವಾಮಿ ಸೈಕಲ್‌ನಲ್ಲಿ ಬಂದಿರುವುದನ್ನು ತಿಳಿದುಕೊಂಡು ಅಧಿಕಾರಿಗಳು ಮತ್ತು ವಕೀಲರೇ ನಿಬ್ಬೆರಗಾಗಿದ್ದಾರೆ. ಅಷ್ಟು ದೂರು ಸೈಕಲ್‌ನಲ್ಲಿ ಏಕೆ ಬಂದೆ? ನಿನಗೊಂದು ದೊಡ್ಡ ನಮಸ್ಕಾರ ಎಂದು ಉದ್ಗಾರ ತೆಗೆದಿದ್ದಾರೆ.

70 ವರ್ಷಗಳ ಹಿಂದಿನ ಚಿತ್ರಣ: ಇದೊಂದು ರೀತಿಯ ‘ರಂಗಣ್ಣನ ಕನಸಿನ ದಿನಗಳು’ ಕಥಾ ಸಂಕಲನದ ‘ಬೋರ್ಡ್ ಒರೆಸುವ ಬಟ್ಟೆಯ ಕಥೆ’ಯಲ್ಲಿನ ಶಿಕ್ಷಣಾಧಿಕಾರಿ ಸೈಕಲ್ ಹತ್ತಿ ಶಾಲೆಗಳ ಪರಿಶೀಲನೆಗೆ ಹೋಗುತ್ತಿದ್ದ ಸನ್ನಿವೇಶ ನಮಗೆ 70 ವರ್ಷಗಳ ಹಿಂದಿನ ಚಿತ್ರಣ ಕಟ್ಟಿಕೊಟ್ಟರೆ, ಇಂದಿನ ಲಾಕ್‌ಡೌನ್ ನಿಂದ ಹಳೇ ಸನ್ನಿವೇಶಗಳು ಅಲ್ಲಲ್ಲಿ ಮರುಕಳಿಸುತ್ತಿವೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಹನ ಸೌಕರ್ಯಗಳಿಲ್ಲದ ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಆಸ್ತಿ ಕ್ರಯ ದಾಖಲೆ ಪ್ರಮಾಣ ಪತ್ರ ತೆಗೆದುಕೊಂಡು ಬರಲು ವಕೀಲರು ಹೇಳಿದರು. ಇದರಿಂದ ದಿಕ್ಕು ತೋಚದಂತಾಯಿತು. ಇದಕ್ಕೆ ದೂರವಾದರೂ ಸೈಕಲ್‌ನಲ್ಲಿ ಹೋಗಬೇಕಾಯಿತು. ನಾರಾಯಣಸ್ವಾಮಿ, ಸೈಕಲ್ ತುಳಿದವ.