ಮಡಿಕೇರಿ : ಎಎನ್‌ಎಂ ಶುಶ್ರೂಷಕಿಯರ ತರಬೇತಿಯ ಪ್ರಮಾಣಪತ್ರಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನ್ಯತೆ ನೀಡಿ ಉದ್ಯೋಗ ಒದಗಿಸಬೇಕೆಂದು ಒತ್ತಾಯಿಸಿ ಕೊಡಗು ಎಎನ್‌ಎಂ ಅಸೋಸಿಯೇಷನ್ ಮಡಿಕೇರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಶುಶ್ರೂಶಕಿಯರು ಬೇಡಿಕೆಯ ಈಡೇರಿಕೆಗಾಗಿ ಆಗ್ರಹಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಭಾಗ್ಯಶ್ರೀ ಮಾತನಾಡಿ, ಎಎನ್‌ಎಂ ಶುಶ್ರೂಷಕಿಯರಾಗಿ ತರಬೇತಿ ಪಡೆದವರ ಪ್ರಮಾಣ ಪತ್ರಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮಾನ್ಯತೆ ನೀಡುತ್ತಿಲ್ಲ. ಇದರಿಂದ ತರಬೇತಿ ಪಡೆದವರು ಉದ್ಯೋಗ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ತರಬೇತಿ ಪಡೆಯುತ್ತಿರುವವರು ಗೊಂದಲಕ್ಕೀಡಾಗಿದ್ದು, ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಕಷ್ಟು ಜನ ಸಾಲ ಮಾಡಿ ಎಎನ್‌ಎಂ ಶುಶ್ರೂಷಕಿಯರ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಇವರ ಶಿಕ್ಷಣಕ್ಕೆ ಮಾನ್ಯತೆ ಇಲ್ಲದಾಗಿದೆ. ಈಗಾಗಲೆ ತರಬೇತಿ ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ಅಧಿಕೃತ ಮುದ್ರೆ ಇರುವ ಪ್ರಮಾಣ ಪತ್ರ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು.
ಸರ್ಕಾರ ಮತ್ತು ಆರೋಗ್ಯ ಇಲಾಖೆ ಸ್ಪಂದನೆ ನೀಡದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರವಿಗೌಡ ಹಾಗೂ ಕೊಡಗಿನ ವಿವಿಧೆಡೆಯಿಂದ ಆಗಮಿಸಿದ್ದ ಎಎನ್‌ಎಂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಆರೋಗ್ಯಾಧಿಕಾರಿಗಳ ಗಮನ ಸೆಳೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಅವರನ್ನು ಭೇಟಿಯಾಗಿ ಬೇಡಿಕೆಯ ಕುರಿತು ಗಮನ ಸೆಳೆದರೂ ಸ್ಪಂದನೆ ಸಿಗಲಿಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ, ಈ ಬೇಡಿಕೆ ಬಗ್ಗೆ ನನಗೆ ತಿಳಿದೇ ಇಲ್ಲವೆಂದು ಹೇಳಿದರೆಂದು ಪ್ರತಿಭಟನಾಕಾರರು ಆರೋಪಿಸಿದರು.