ಸ.ದಾ. ಜೋಶಿ ಬೀದರ್
ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಶೀಘ್ರದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಆದರೆ, ಈ ಪಟ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರನ್ನು ದೂರವಿಟ್ಟಿರುವುದು ಜಿಲ್ಲೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಉಪ ಸಮರದ ಹೊಸ್ತಿಲಲ್ಲಿ ಸ್ಥಳೀಯ ಕೇಸರಿ ಪಡೆಯೊಳಗೆ ಗುಂಪುಗಾರಿಕೆ, ಆಂತರಿಕ ಕಚ್ಚಾಟಕ್ಕೆ ನಾಂದಿ ಹಾಡುವ ಲಕ್ಷಣಗಳು ಗೋಚರಿಸಿವೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಸತಿ ಸಚಿವ ವಿ. ಸೋಮಣ್ಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸ್ಥಳೀಯ ಸಂಸದ ಭಗವಂತ ಖೂಬಾ, ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಅವರನ್ನು ಚುನಾವಣೆ ಉಸ್ತುವಾರಿ ವಹಿಸಲಾಗಿದೆ. ಆದರೆ ಈ ಭಾಗದಿಂದ (ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಿಂದ) ಪ್ರತಿನಿಧಿಸುವ ಏಕೈಕ ಸಚಿವರು, ಜಿಲ್ಲೆಯ ಒಬ್ಬರೇ ಬಿಜೆಪಿ ಶಾಸಕರಾದ ಪ್ರಭು ಚವ್ಹಾಣ್ ಅವರಿಗೆ ಇದರಲ್ಲಿ ಸ್ಥಾನ ಕಲ್ಪಿಸಿಲ್ಲ. ಇದು ಸಹಜವೇ ಹಲವು ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಇತ್ತೀಚೆಗೆ ಕೆಲವು ಗುಂಪುಗಳು ಸಕ್ರಿಯವಾಗಿವೆ. ವಿವಿಧ ಗುಂಪುಗಳಲ್ಲಿರುವ ಕೆಲವು ಪ್ರಮುಖರು ಸರ್ಕಾರ ಹಾಗೂ ಪಕ್ಷದ ವರಿಷ್ಠರ ಮಟ್ಟದಲ್ಲಿ ತಮ್ಮ ವರ್ಚಸ್ಸು, ಪ್ರಾಬಲ್ಯ ತೋರಿಸುವಲ್ಲಿ ತೊಡಗಿದ್ದಾರೆ. ಇಂಥದರಲ್ಲಿ ಉಸ್ತುವಾರಿ ಪಟ್ಟಿಯಲ್ಲಿ ಸ್ಥಾನ ಸಿಗದಿರುವುದು ಸಹಜವೇ ಸಚಿವ ಪ್ರಭು ಚವ್ಹಾಣ್ ಅವರಿಗೆ ಇರಿಸು-ಮುರಿಸು ಉಂಟುಮಾಡುವ ಜತೆಗೆ ತಳಮಳಕ್ಕೂ ಕಾರಣವಾಗಿದೆ. ಪಕ್ಷದ ವರಿಷ್ಠರು ಉಸ್ತುವಾರಿ ನೇಮಕ ಯಾವ ಲೆಕ್ಕಾಚಾರ, ಮಾನದಂಡದಲ್ಲಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಇದು ಚವ್ಹಾಣ್ ಪಾಲಿಗೆ ಮಾತ್ರ ಇದು ಹಿನ್ನಡೆ ಬೆಳವಣಿಗೆ. ಹೀಗಾಗಿ ಇದು ಬರುವ ದಿನಗಳಲ್ಲಿ ಪಕ್ಷದೊಳಗಿನ ಬೇಗುದಿಯು ಹೆಚ್ಚಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ಬಸವಕಲ್ಯಾಣ ಕ್ಷೇತ್ರ ಮೊದಲ ಸಲ ಉಪ ಚುನಾವಣೆ ಎದುರಿಸುತ್ತಿದೆ. ಈ ವಾರದೊಳಗೆ ಆಯೋಗವು ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡುವ ಸಾಧ್ಯತೆಗಳಿವೆ. ಮತ್ತೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಕಾಂಗ್ರೆಸಿಗರು ತಂತ್ರ ಹೆಣೆಯುತ್ತಿದ್ದರೆ, ಕ್ಷೇತ್ರ ಕೈವಶಕ್ಕಾಗಿ ಆಡಳಿತರೂಢ ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ. ಎರಡೂ ಪಕ್ಷಗಳಿಂದ ಅಭ್ಯರ್ಥಿ ಯಾರಾಗಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಖಾಡಕ್ಕೆ ಈಗಾಗಲೇ ರಂಗೇರಿದೆ. ಘಟಾನುಘಟಿ ನಾಯಕರಿಗೆ ಬಿಜೆಪಿಯು ಉಸ್ತುವಾರಿ ವಹಿಸಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರಿಗೂ ಇಲ್ಲಿನ ಉಸ್ತುವಾರಿಗಳ ಪಟ್ಟಿಯಲ್ಲಿ ಸ್ಥಾನ ಸಿಗುವ ಭರವಸೆಯಿತ್ತು. ಆದರೆ ಅಂತಿಮವಾಗಿ ಮಸ್ಕಿ ಹೊಣೆ ನೀಡಲಾಗಿದೆ. ಕಲ್ಯಾಣದಲ್ಲಿ ವಿಜಯೇಂದ್ರ ಅವರು ಒಮ್ಮೆ ಸಂಚರಿಸಿ ಹವಾ ಎಬ್ಬಿಸಿದ್ದರು. ಇವರೂ ಉಸ್ತುವಾರಿ ಆಗ್ತಾರೆಂಬ ವಿಶ್ವಾಸ ಕ್ಷೇತ್ರದ ಕೇಸರಿ ಪಡೆಗಿತ್ತು. ಆದರೆ ವರಿಷ್ಠರ ನಿರ್ಣಯ ಅನೇಕರಲ್ಲಿ ನಿರಾಶೆ ಮೂಡಿಸಿದೆ. ಇದರೊಟ್ಟಿಗೆ ಸಚಿವ ಚವ್ಹಾಣ್ ಅವರಿಗೂ ದೂರವಿಟ್ಟಿರುವುದು ಗಮನಾರ್ಹ ಎನಿಸಿದೆ.
ಶೀತಲ ಸಮರ ಕಾರಣವೆ?
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಮತ್ತು ಸಂಸದ ಭಗವಂತ ಖೂಬಾ ಅವರ ನಡುವೆ ಮತ್ತೆ ಶೀತಲ ಸಮರ ಶುರುವಾಗಿದೆ. ಚವ್ಹಾಣ್ ಅವರಿಗೆ ಕಲ್ಯಾಣದ ಉಸ್ತುವಾರಿ ಪಟ್ಟಿಯಲ್ಲಿ ಸ್ಥಾನ ಸಿಗದಿರುವುದರ ಹಿಂದೆ ಈ ಬೆಳವಣಿಗೆಯೂ ಕಾರಣವಿರಬಹುದಾ? ಎಂಬ ಚರ್ಚಾ ವಿಷಯ ಈಗ ಮುನ್ನೆಲೆಗೆ ಬಂದಿರುವುದು ಮಹತ್ವದ ಸಂಗತಿ. ಖೂಬಾ ಹಾಗೂ ಚವ್ಹಾಣ್ ಅವರ ನಡುವೆ ಮೊದಲಿನಿಂದಲೂ ಸಂಬಂಧ ಅಷ್ಟಕ್ಕಷ್ಟೇ ಇದೆ. ಸುದೀರ್ಘ ಅವಧಿ ಇಬ್ಬರ ಬಣಗಳ ನಡುವೆ ತಿಕ್ಕಾಟ ನಡೆದಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ ಇದು ತಾರಕಕ್ಕೇರಿತ್ತು. ಆದರೆ ಲೋಕಸಭೆ ಚುನಾವಣೆ ಹೊತ್ತಿನಿಂದ ಸ್ವಲ್ಪ ತಣ್ಣಗಾಗಿತ್ತು. ವರ್ಷದ ಹಿಂದೆ ಚವ್ಹಾಣ್ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಬಳಿಕ ಇಬ್ಬರೂ ಜತೆ, ಜತೆಯೇ ಇರಲಾರಂಭಿಸಿದರು. ಇಬ್ಬರೂ ಒಂದಾಗಿದ್ದಾರೆ ಎಂದು ಹೇಳುವಷ್ಟರಲ್ಲೇ ಈಗ ಮತ್ತೆ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ಇದು ಮುಂದೆ ಯಾವ ಹಂತಕ್ಕೆ ತಲುಪವುದೋ ಕಾದು ನೋಡಬೇಕೆಂಬ ಚರ್ಚೆಗಳು ಪಕ್ಷದ ವಲಯದಿಂದಲೇ ಕೇಳಿಬರುತ್ತಿವೆ. ಜಿಲ್ಲೆ ಬಿಜೆಪಿಯಲ್ಲಿನ ಸದ್ಯದ ಸ್ಥಿತಿ ಗಮನಿಸಿದರೆ ಎಲ್ಲವೂ ಸರಿಯಿಲ್ಲ. ಅಧಿಕಾರಿಗಳ ವರ್ಗಾವಣೆ, ವಿವಿಧ ಕಾಮಗಾರಿ, ಟೆಂಡರ್ ಇತರೆ ವಿಷಯದಲ್ಲಿ ಮೈ ಬಡಾ, ತು ಬಡಾ' ಎಂಬ ಹಗ್ಗಜಗ್ಗಾಟ ಜೋರಾಗಿ ನಡೆದಿದೆ. ಕೆಲ ಮುಖಂಡರಂತೂ ಸ್ಥಳೀಯಕ್ಕಿಂತ ಹೆಚ್ಚಾಗಿ ವಿಧಾನಸಭೆ, ವಿಕಾಸಸೌಧದಲ್ಲೇ ಕಾಣುತ್ತಿದ್ದಾರೆ!. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಅಭಿವೃದ್ಧಿ ಕೆಲಸಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಆದ್ಯತೆ ಮೇಲೆ ಯಾವ್ಯಾವ ಕೆಲಸ ಆಗಬೇಕಿದೆ? ಏನು ಮಾಡಬೇಕೆಂಬ ಸಮರ್ಪಕ ಯೋಜನೆ ಸಹ ಹೊಂದಿಲ್ಲ. ಇದರ ನಡುವೆ ನಾಯಕರಪ್ರತಿಷ್ಠೆ ಸಮರ' ದಿನೇ ದಿನೆ ಹೆಚ್ಚುತ್ತಿರುವುದು ವಿಚಿತ್ರವೆನಿಸಿದೆ. ಬಸವಕಲ್ಯಾಣ ಚುನಾವಣೆ ಮೇಲೂ ಇದು ಯಾವ ರೀತಿ ಪರಿಣಾಮ, ಪ್ರಭಾವ ಬೀರುತ್ತದೆ ಕಾದು ನೋಡಬೇಕು.
ವಿಜಯೇಂದ್ರ ಸ್ಪರ್ಧಿಸಲ್ಲ…
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಪಕ್ಷದ ವರಿಷ್ಠರು ಮಸ್ಕಿ ವಿಧಾನಸಭೆ ಕ್ಷೇತ್ರದ ಉಸ್ತುವಾರಿ ವಹಿಸಿದ್ದಾರೆ. ಇದರೊಂದಿಗೆ ವಿಜಯೇಂದ್ರ ಅವರು ಬಸವಕಲ್ಯಾಣ ಕ್ಷೇತ್ರದ ಅಭ್ಯರ್ಥಿ ಆಗಲಿದ್ದಾರೆ ಎಂಬ ಚರ್ಚೆ, ಕುತೂಹಲಕ್ಕೂ ತೆರೆ ಬಿದ್ದಂತಾಗಿದೆ. ವಿಜಯೇಂದ್ರ ಅವರು ಅಭ್ಯರ್ಥಿ ಆಗಲ್ಲ ಎಂಬುದು ಉಸ್ತುವಾರಿ ನೇಮಕವೇ ಸ್ಪಷ್ಟ ಸಂದೇಶ ರವಾನಿಸಿದೆ. ಇದು ಸಹಜವೇ ಪಕ್ಷದ ಸ್ಥಳೀಯ ಡಜನ್ ಗೂ ಅಧಿಕ ಟಿಕೆಟ್ ಆಕಾಂಕ್ಷಿಗಳ ಮುಖದಲ್ಲಿ ಕಳೆ ತಂದಿದೆ. ಟಿಕೆಟ್ ಲಾಬಿ ಬಿರುಸುಗೊಳಿಸುವಂತೆ ಮಾಡಿದೆ.
ಯಾರಾಗುವರು ಅಭ್ಯರ್ಥಿ?
ಬಿಜೆಪಿ ಟಿಕೆಟ್ ಗಾಗಿ 12ಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ತೀವ್ರ ಕಸರತ್ತು ನಡೆದಿದೆ. ವರಿಷ್ಠರ ಲೆಕ್ಕಾಚಾರದಲ್ಲಿ ಗೆಲ್ಲುವ ಕುದುರೆ ಯಾರಾಗಬಹುದು? ಯಾವ ಜಾತಿಯವರಿಗೆ ಮನ್ನಣೆ ಸಿಗಬಹುದು? ಸ್ಥಳೀಯರಿಗೆ ಕಣಕ್ಕಿಳಿಸುತ್ತಾರಾ ಅಥವಾ ಹೊರಗಿನವರಿಗೆ ನಿಲ್ಲಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿಯಲ್ಲಿ ಇತ್ತೀಚೆಗೆ ವಿವಿಧ ನೇಮಕ, ಆಯ್ಕೆಗಳಲ್ಲಿ ಅಚ್ಚರಿ ನಿರ್ಣಯ ಬರುತ್ತಿವೆ. ಯಾರು ಏನೇ ಲಾಬಿ ಮಾಡಲಿ, ಎಷ್ಟೇ ಸಂಪರ್ಕ ಮತ್ತು ಪ್ರಭಾವ ಹೊಂದಿರಲಿ, ಯಾರದೇ ಬೆಂಬಲ, ಕೃಪಾಶೀರ್ವಾದ ಪಡೆದಿದ್ದರೂ ನಮಗೇ ಟಿಕೆಟ್ ಸಿಗುತ್ತದೆ ಎಂದು ಹೇಳದಂಥ ಸ್ಥಿತಿಯಿದೆ. ಹೀಗಾಗಿ ಟಿಕೆಟ್ ಮೇಲೆ ಕಣ್ಣಿಟ್ಟವರಿಗೆ ಅಚ್ಚರಿ ಆಯ್ಕೆಯ ತಳಮಳ ಕಾಡುತ್ತಿದೆ. ಪಕ್ಷದ ಹೈಕಮಾಂಡ್, ಕೇಂದ್ರ ಚುನಾವಣಾ ಸಮಿತಿ ಎಲ್ಲವೂ ಅಳೆದು, ತೂಗಿ ಅಭ್ಯರ್ಥಿ ಅಂತಿಮಗೊಳಿಸಲಿದೆ. ಪಕ್ಷದ ಜತೆಗೆ ಆರೆಸ್ಸೆಸ್ ಮುಖಂಡರ ಅಭಿಪ್ರಾಯ ಸಹ ಮಹತ್ವ ಪಡೆಯಲಿದೆ. ಹೀಗಾಗಿ ಆಡಳಿತರೂಢ ಪಕ್ಷದ ಅಭ್ಯರ್ಥಿ ಯಾರಾಗಬಹುದೆಂಬ ಕುತೂಹಲವಿದೆ.
ಬಸವಕಲ್ಯಾಣದಲ್ಲಿ ಪಕ್ಷದ ಅಭ್ಯರ್ಥಿಯನ್ನು ಭರ್ಜರಿ ಜಯ ತಂದುಕೊಡುವುದೇ ನಮ್ಮೆಲ್ಲರ ಏಕೈಕ ಧ್ಯೇಯ. ಯಾರಿಗೆ ಯಾವ ಸಮಯದಲ್ಲಿ, ಏನೇನು ಜಿಮ್ಮೇದಾರಿಗಳನ್ನು ವಹಿಸಬೇಕೆಂಬುದು ವರಿಷ್ಠರಿಗೆ ಚೆನ್ನಾಗಿ ಗೊತ್ತಿದೆ. ಚುನಾವಣೆ ಉಸ್ತುವಾರಿ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿಲ್ಲ ಎಂಬುದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ. ವರಿಷ್ಠರು ಸೂಕ್ತ ಸಮಯದಲ್ಲಿ ಉತ್ತಮ ನಿರ್ಣಯ ಕೈಗೊಳ್ಳುತ್ತಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ದುಡಿಯುತ್ತಿದ್ದೇನೆ.| ಪ್ರಭು ಚವ್ಹಾಣ್ಜಿಲ್ಲಾ ಉಸ್ತುವಾರಿ ಸಚಿವ
ಬಸವಕಲ್ಯಾಣ ಚುನಾವಣೆ ಉಸ್ತುವಾರಿಯಾಗಿ ನೇಮಿಸಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿರುವೆ. ವರಿಷ್ಠರು ನಿಲ್ಲಿಸುವ ಅಭ್ಯರ್ಥಿಗೆ ಗೆಲ್ಲಿಸುವುದೇ ನಮ್ಮ ಹೊಣೆ. ಇದಕ್ಕಾಗಿ ಹಗಲಿರುಳು ಶ್ರಮಿಸಲಾಗುತ್ತದೆ. ಈಗಾಗಲೇ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಲಾಗಿದೆ. ಕಾಂಗ್ರೆಸ್ ದುರಾಡಳಿತ, ಬಿಜೆಪಿಯ ಉತ್ತಮ ಆಡಳಿತ ಹಾಗೂ ಕಲ್ಯಾಣದ ಪ್ರಗತಿಗೆ ನೀಡಿದ ಕೊಡುಗೆಗಳು ಗೆಲುವಿಗೆ ಕಾರಣವಾಗಲಿವೆ. | ಭಗವಂತ ಖೂಬಾ,ಸಂಸದ ಮತ್ತು ಬಸವಕಲ್ಯಾಣ ಚುನಾವಣೆ ಉಸ್ತುವಾರಿ