ಜಿಲ್ಲೆ

ಪ್ರಭುತ್ವವನ್ನು ಓಲೈಸುವ ಮನಸ್ಥಿತಿ ಬೇಡ

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಕಲಾವಿದರು, ಲೇಖಕರು ಪ್ರಭುತ್ವವನ್ನು ಓಲೈಸುವಂತಹ ಮನಸ್ಥಿತಿಯಿಂದ ಹೊರಬರಬೇಕಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಹಾದೇವ ಶಂಕನಪುರ ತಿಳಿಸಿದರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಚಾಮರಾಜನಗರ ಜಿಲ್ಲಾ ಲೇಖಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಬರಹಗಾರರು ಮತ್ತು ಕಲಾವಿದರು ಅತ್ಯಂತ ನಿರ್ಭೀತಿಯಿಂದ ಮತ್ತು ನಿಷ್ಠುರವಾದಿಗಳಾಗಿರಬೇಕು. ಕಲಾವಿದರು ಅಥವಾ ಯಾವುದೇ ಸಾಧಕರಾಗಲಿ ಲಾಬಿ ಮಾಡುವುದಕ್ಕೆ ಹೋಗಬಾರದು. ಇಂತಹ ಪರಿಸ್ಥಿತಿಯಿಂದ ಆಚೆ ಬಂದು ಸ್ವತಂತ್ರವಾಗಿ ಕಲೆಯನ್ನು ಪ್ರದರ್ಶನ ಮಾಡಲು ವೇದಿಕೆಯನ್ನು ಸೃಷ್ಟಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿಭಾವಂತ ಬರಹಗಾರರು, ಲೇಖಕರು, ಕಥೆಗಾರರು, ಸಾಹಿತಿಗಳು, ಕವಿಗಳು, ಕಲಾವಿದರು ಜಿಲ್ಲೆಯಲ್ಲಿ ಇದ್ದಾರೆ. ಇದಕ್ಕೆ ಅನೇಕ ನಿದರ್ಶನಗಳು ನಮ್ಮ ಮುಂದಿದೆ. ಮೈಸೂರು ದಸರಾ ಅಂಗವಾಗಿ ಚಾಮರಾಜನಗರದಲ್ಲಿ ಕಳೆದ ಎಂಟ್ಹತ್ತು ವರ್ಷಗಳಿಂದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ ಎಂದರು.

ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದ ಸಂದರ್ಭದಲ್ಲಿ ಚಾ.ನಗರ ದಸರಾಕ್ಕೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಮೈಸೂರು ದಸರಾಗೂ ಚಾ.ನಗರಕ್ಕೂ ಸಂಬಂಧವಿಲ್ಲ ಎಂಬ ಹೇಳಿಕೆ ಅತ್ಯಂತ ಅಪ್ರಸ್ತುತವಾಗಿದೆ. ಚಾ.ನಗರ ಜಿಲ್ಲೆ ಹಾಗೂ ಎಲ್ಲ ತಾಲೂಕುಗಳು ಮೈಸೂರಿನ ಅವಿಭಾಜ್ಯ ಅಂಗವಾಗಿದೆ. ಸಾಂಸ್ಕೃತಿಕವಾಗಿಯೂ ಕೂಡ ಮೈಸೂರು ದಸರಾ ಹಾಗೂ ಮೈಸೂರು ಚರಿತ್ರೆಯ ಅಸ್ಮಿತೆ ನಮ್ಮ ಚಾಮರಾಜನಗರ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ದುಂಡು ಮಹದೇವಯ್ಯ, ಸಾಹಿತಿ ಮದ್ದೂರು ದೊರೆಸ್ವಾಮಿ ಹಾಜರಿದ್ದರು.

ಕವಿತೆಗಳ ವಾಚನ ಜಿಲ್ಲೆಯಲ್ಲಿ ಈ ಬಾರಿ ಸರ್ಕಾರ ದಸರಾ ಮಹೋತ್ಸವವನ್ನು ಆಚರಣೆ ಮಾಡದ ಕಾರಣ ದಸರಾ ನಿಂತರೂ ದಸರಾ ಕವಿಗೋಷ್ಠಿ ನಿಲ್ಲಬಾರದು ಎಂಬ ಉದ್ದೇಶದಿಂದ ಜಿಲ್ಲಾ ಲೇಖಕರ ಸಂಘದ ವತಿಯಿಂದ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ಬಹಳ ವಿಶೇಷವಾಗಿ ನಡೆಸಲಾಗಿತ್ತು. ಕವಿಗಳಾದ ಶೀಲಾ ಸತ್ಯೇಂದ್ರಸ್ವಾಮಿ, ಶಿವಕುಮಾರ್ ಕೆಂಪನಪುರ, ಡಾ.ಪಿ.ಪ್ರೇಮಾ, ಕಾತ್ಯಾಯಿನಿ, ಬಿ.ಆರ್.ಕೃಷ್ಣಕುಮಾರ್, ಮಂಜುನಾಥ್ ಕೆಸ್ತೂರು, ಕೋಮಲಾ, ಸಿದ್ದಲಿಂಗಸ್ವಾಮಿ, ೈರೋಜ್ ಖಾನ್, ಸುಂದರ್ ಕಲಿವೀರ, ಮಂಜುಳಾ, ಪ್ರಸಾದ್ ಅರಳೀಪುರ, ಶಿವರಾಜು ಬೂದಿತಿಟ್ಟು, ಶಶಿಕುಮಾರ್, ಸುಮಾ, ಪುಷ್ಪ ಬೆಂಡರವಾಡಿ ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಚಾಮರಾಜನಗರ ದಸರಾ ನಿಂತರೂ, ಕವಿ ಮನಸುಗಳ ಮೆರವಣಿಗೆ ನಿಲ್ಲಬಾರದು ಎಂಬುದು ನನ್ನ ಆಶಯ. ಯಾರ ಧನಸಹಾಯ ಪಡೆಯದೆ ಜಿಲ್ಲಾ ಲೇಖಕರ ಸಂಘದ ವತಿಯಿಂದ ದಸರಾ ಕವಿಗೋಷ್ಠಿಯನ್ನು ಆಯೋಜನೆ ಮಾಡಿದ್ದೇವೆ. ಕವಿಗಳ ಭಾವನೆಯನ್ನು ಅನಾವರಣಗೊಳಿಸಲು, ಅಂತರಂಗ ವಿಚಾರಗಳನ್ನು ಹೊರಹಾಕಲು ಇದು ವೇದಿಕೆಯಾಗಿದೆ. ಸೋಮಶೇಖರ್ ಬಿಸಲವಾಡಿ, ಕಾರ್ಯದರ್ಶಿ, ಜಿಲ್ಲಾ ಲೇಖಕರ ಸಂಘ, ಚಾಮರಾಜನಗರ