ಕೆ.ಆರ್.ನಗರ ವಿವಿಧೆಡೆ ಕನ್ಸರ್‌ವೆನ್ಸ್ (ಗಲ್ಲಿ)ರಸ್ತೆಗಳಲ್ಲಿ ಗಿಡ ಗಂಡೆಗಳು ಬೆಳೆದು ಕಸದ ರಾಸಿಯಾಗಿರುವುದು. 
ಜಿಲ್ಲೆ

ಪ್ರಭಾವಿಗಳಿಂದ ಕನ್ಸರ್‌ವೆನ್ಸಿ ಒತ್ತುವರಿ

ಕೆ.ಆರ್.ನಗರ: ಪಟ್ಟಣದಲ್ಲಿ ಕನ್ಸರ್‌ವೆನ್ಸಿ(ಗಲ್ಲಿ)ಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ, ಕೆಲವರು ತ್ಯಾಜ್ಯವನ್ನು ಸುರಿಯುತ್ತಿರುವ ಪರಿಣಾಮ ಕಸದ ಕೊಂಪೆಯಾಗಿ ಮಾರ್ಪಾಡಾಗುತ್ತಿದ್ದು, ಇದರಿಂದ ರಸ್ತೆ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಉದ್ಭವಿಸಿದ್ದರೂ ಪುರಸಭಾ ಅಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿ ಕಣ್ಮುಚ್ಚಿ ಕುಳಿತ್ತಿದ್ದಾರೆ.

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ನೇತೃತ್ವದಲ್ಲಿ ಜರ್ಮನ್ ವಾಸ್ತುಶಿಲ್ಪಿ ಗುಸ್ತಾವ್ ಹರ್ಮನ್ ಕ್ರುಂಬಿಗೆಲ್ ಅವರಿಂದ ರೂಪಿತಗೊಂಡ ಕೃಷ್ಣರಾಜನಗರ (ಕೆ.ಆರ್.ನಗರ) ಪಟ್ಟಣದ ನೀಲಿನಕ್ಷೆಯಲ್ಲಿ ಅಂದೇ ವಿಶಾಲವಾದ ರಸ್ತೆಗಳು, ನಿವೇಶನಗಳ ಹಿಂಭಾಗದಲ್ಲಿ ಕನ್ಸರ್‌ವೆನ್ಸಿ(ಗಲ್ಲಿ)ಗಳನ್ನು ನಕ್ಷೆಯಲ್ಲಿ ತೋರಿಸಿರುವಂತೆ 20 ಅಡಿಗಳಷ್ಟು ಅಗಲವುಳ್ಳ ಗಲ್ಲಿ ನಿರ್ಮಾಣ ಮಾಡಿದ್ದರು.

ಆದರೆ ಈಗ ಪುರಸಭಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕನಸಿನ ಕೂಸಾದ ಕೃಷ್ಣರಾಜನಗರ ತನ್ನ ಅಂದವನ್ನು ಹಾಳು ಮಾಡಿಕೊಳ್ಳುವುದರ ಜತೆಗೆ ಕನ್ಸರ್‌ವೆನ್ಸಿ(ಗಲ್ಲಿಗಳು)ಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣ, ಒತ್ತುವರಿಯಾಗುತ್ತಿವೆ. ಜತೆಗೆ ಕೆಲವು ಮನೆಯವರು, ಅಂಗಡಿ- ಮುಂಗಟ್ಟುಗಳವರು ಗಲ್ಲಿಗಳಲ್ಲಿ ಅಡ್ಡಾದಿಡ್ಡಿಯಾಗಿ ಕಸ ಸುರಿಯುತ್ತಿರುವುದರಿಂದ ಅಕ್ಕಪಕ್ಕದವರಿಗೆ ಕಿರಿಕಿರಿಯಾಗುತ್ತಿದೆಯಲ್ಲದೆ ಒತ್ತುವರಿಯಿಂದ ರಸ್ತೆ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.

ಇಂತಹ ಸಮಸ್ಯೆಗಳಿಂದ ಪಟ್ಟಣದ ರಾಜಕಾಲುವೆಗಳು, ಒಳಚರಂಡಿ ನಿರ್ವಹಣೆ ಮಾಡುವುದು ಸಹ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಇನ್ನಾದರೂ ಪುರಸಭಾ ಅಧಿಕಾರಿಗಳು ಪಟ್ಟಣದಲ್ಲಿ ಕಟ್ಟಡ ನಿರ್ಮಿಸುವಾಗ ಸರ್ಕಾರಿ ರಸ್ತೆ, ಜಾಗ ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸುವುದಲ್ಲದೆ ಕಸದ ಕೊಂಪೆಗಳಾಗಿರುವ ಕನ್ಸರ್‌ವೆನ್ಸಿ ಗಲ್ಲಿಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಿ ಎಂಬುದನ್ನು ನಾಗರಿಕರು ‘ಲೌಡ್ ಸ್ಪೀಕರ್’ ಮೂಲಕ ಆಗ್ರಹಿಸಿದ್ದಾರೆ.

ಸುಯೋಜಿತ ನಗರದ ಹೆಸರುಳಿಸಲಿ
ರಾಜ್ಯದಲ್ಲಿಯೇ ಸುಸಜ್ಜಿತವಾಗಿ ನಿರ್ಮಾಣವಾಗಿರುವ ನಗರ ಎಂಬ ಹೆಸರು ಪಟ್ಟಣಕ್ಕಿದ್ದು, ಇದಕ್ಕೆ ಧಕ್ಕೆಯಾಗದಂತೆ ಎಲ್ಲರೂ ನಿಯಮಗಳನ್ನು ಪಾಲಿಸುವಂತೆ ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವಂತೆ ಪುರಸಭಾ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಗೆ ಶಾಸಕ ಡಿ.ರವಿಶಂಕರ್ ಸೂಚನೆ ನೀಡಲಿ.
ರವಿಪೂಜಾರಿ, ಬಟ್ಟೆ ವ್ಯಾಪಾರಿ.

ನಿಯಮಗಳ ಉಲ್ಲಂಘನೆ
ನಗರ ಯೋಜನಾ ಪ್ರಾಧಿಕಾರ ಕೇವಲ ತಾಂತ್ರಿಕ ಅನುಮೋದನೆಗೆ ಮಾತ್ರ ನೀಡುತ್ತದೆ. ಆದರೆ, ಅದನ್ನು ಜಾರಿಗೆ ತರಬೇಕಾದದ್ದು ಪುರಸಭೆ. ನಗರದಾದ್ಯಂತ ಪುರಸಭೆೆೆಯ ನಿಯಮಗಳನ್ನು ಗಾಳಿಗೆ ತೂರಿರೋ ಖಾಸಗಿ ಕಟ್ಟಡದ ಮಾಲೀಕರು ಕನ್ಸರ್‌ವೆನ್ಸಿ (ಗಲ್ಲಿಗಳು)ಗಳನ್ನು ಮಾತ್ರವಲ್ಲ ಮುಖ್ಯ ರಸ್ತೆಗಳನ್ನೂ ಒತ್ತುವರಿ ಮಾಡುತ್ತಿದ್ದಾರೆ.
ಸೈಯದ್ ಜಾಬೀರ್, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ.

ರಾಜಕೀಯ ಪ್ರಭಾವ
ಕಳೆದ 15 ವರ್ಷಗಳಿಂದ ಪಟ್ಟಣದಲ್ಲಿ ರಾಜಕೀಯ ಪ್ರಭಾವದಿಂದ ಕೆಲವರು ಎಲ್ಲೆಂದರಲ್ಲಿ ರಸ್ತೆ, ಖಾಲಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ತರಕಾರಿ ಮಾರುಕಟ್ಟೆ ಸ್ಥಗಿತವಾಗಿ ರಸ್ತೆ ಬದಿಗಳಲ್ಲೇ ತರಕಾರಿ ಮಾರಾಟ ನಡೆಯುತ್ತಿರುವುದರಿಂದ ಅನುಪಯುಕ್ತ ತರಕಾರಿ, ಹಣ್ಣು ಹಂಪಲುಗಳನ್ನು ಬೇಕಾಬಿಟ್ಟಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಶಾಸಕರು ಇದೆಲ್ಲ ವ್ಯವಸ್ಥೆಯನ್ನು ಸರಿಪಡಿಸಲಿ.
ಉಮಾಶಂಕರ್, ಪುರಸಭಾ ಮಾಜಿ ಸದಸ್ಯ

ಅಧಿಕಾರಿಗಳು ಶಾಮೀಲು
ಯಾವುದೇ ಕಟ್ಟಡಗಳನ್ನು ನಿರ್ಮಿಸುವಾಗ ಸಂಬಂಧಪಟ್ಟ ಇಲಾಖೆಗಳ ಅನುಮತಿ ಕಡ್ಡಾಯವಾಗಿದ್ದು, ಮಾಲೀಕರು ಅನುಮತಿ ತೆಗೆದುಕೊಳ್ಳುವುದೇ ಬೇರೆ. ಅದನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸುವುದೇ ಬೇರೆ. ಅಧಿಕಾರಿಗಳು ಲಂಚದ ಆಮಿಷಕ್ಕೊಳಗಾಗಿ ಇವುಗಳೆಲ್ಲವನ್ನು ಕಂಡರು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಎಂ.ಎ.ನಾಗೇಂದ್ರ, ಮಧುವನಹಳ್ಳಿ ಬಡಾವಣೆ.

ಕಸದ ಕೊಂಪೆ
ನಮ್ಮ ಪುರಸಭೆಗೆ ಹಲವು ಬಾರಿ ಸ್ವಚ್ಛ ನಗರಿ ಎಂಬ ಗರಿ ಸಿಕ್ಕಿದ್ದರೂ ಅದು ಪ್ರಶಸ್ತಿಗೆ ಮಾತ್ರ ಸೀಮಿತವಾಗಿದೆ. ಹಸಿಕಸ, ಒಣಕಸ ವಿಂಗಡಣೆ ಮಾಡಿ ಕಸದ ವಾಹನಗಳಿಗೆ ನೀಡಲು ಮನೆ ಮನೆಗೆ ಕಸದ ಬುಟ್ಟಿಗಳನ್ನು ನೀಡಿದ್ದರು. ಇನ್ನು ಕೆಲವು ಮಂದಿ ಬೀದಿಗಳಲ್ಲೇ ಕಸ ಹಾಕುತ್ತಿದ್ದಾರೆ. ಇದಕ್ಕೆ ಹೆಚ್ಚು ಬಳಕೆಯಾಗುತ್ತಿರುವುದು ಕನ್ಸರ್‌ವೆನ್ಸಿ ಗಲ್ಲಿಗಳೇ ಆಗಿವೆ. ಇದರಿಂದ ಅವೆಲ್ಲ ಕಸದ ಕೊಂಪೆಗಳಾಗಿವೆ.
ಕೆ.ಎಸ್.ಗುಣಶೇಖರ್, ಬಿಜೆಪಿ ಮುಖಂಡ

ತೆರವು ಕಾರ್ಯಾಚರಣೆ ಮಾಡಲಿ
ಅಕ್ರಮ ಮತ್ತು ಒತ್ತುವರಿ ಕಟ್ಟಡಗಳನ್ನು ತೆರವು ಮಾಡದೇ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡುವ ಮೂಲಕ ತೆರವು ಕಾರ್ಯಾಚರಣೆ ಮಾಡಲಿ. ಆ ಜಾಗಗಳನ್ನು ಪುರಸಭಾ ವಶಕ್ಕೆ ಪಡೆದುಕೊಳ್ಳಲಿ.
ಧರ್ಮ, ಕಾಂಗ್ರೆಸ್ ಮುಖಂಡ.

ಅಗತ್ಯ ಕ್ರಮ
ನಾವು ಕಟ್ಟಡ ನಿರ್ಮಿಸಲು ಹಾಗೂ ಕೆಡವಲು ಷರತ್ತುಗಳು ಮತ್ತು ನಿಯಮಗಳನ್ನು ರೂಪಿಸಿದ್ದೇವೆ. ಆದರೆ ಕೆಲವರು ಘನತ್ಯಾಜ್ಯವನ್ನು ರಸ್ತೆ ಬದಿಗಳಲ್ಲೇ ಹಾಕುತ್ತಿದ್ದಾರೆ. ಪುರಸಭೆ ವತಿಯಿಂದ ಕಸದ ಬುಟ್ಟಿಗಳನ್ನು ವಿತರಿಸಿದ್ದರೂ ನಮ್ಮ ಕಸದ ವಾಹನಗಳಿಗೆ ನೀಡದೆ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಲಾಗಿರುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಸುಧಾರಾಣಿ, ಪುರಸಭಾ ಮುಖ್ಯಾಧಿಕಾರಿ.