ಮೂಡಿಗೆರೆ: ಪಟ್ಟಣದ ಡಿಎಸ್‌ಬಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಚಾರ್ಯರು ಸಹ ಪ್ರಾಧ್ಯಾಪಕರನ್ನು ಬೆದರಿಸುತ್ತಾರೆ. ಯಾರೊಬ್ಬರಿಗೂ ಗೌರವ ನೀಡುತ್ತಿಲ್ಲ. ಬೋಧನೆ ಮತ್ತು ಆಡಳಿತದ ವಿಚಾರದಲ್ಲಿ ಸಹಪ್ರಾಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಇಂಥ ಪ್ರಾಚಾರ್ಯರು ಬೇಡ. ಕಾಲೇಜಿಗೆ ಕಾಯಂ ಪ್ರಾಚಾರ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಿ ಸಹಪ್ರಾಧ್ಯಾಪಕರು ಶಾಸಕಿ ನಯನಾ ಮೋಟಮ್ಮ ಅವರಿಗೆ ಶುಕ್ರವಾರ ಮೌಖಿಕವಾಗಿ ಮನವಿ ಮಾಡಿದರು.
ಆರು ವರ್ಷದಿಂದ ಕಾಲೇಜಿಗೆ ಕಾಯಂ ಪ್ರಾಚಾರ್ಯರ ನೇಮಕವಾಗಿಲ್ಲ. ಸಹಪ್ರಾಧ್ಯಾಪಕರಾಗಿ ಬಂದಿರುವ ದಶರಥ ಅವರಿಗೆ ಪ್ರಭಾರ ಪ್ರಾಚಾರ್ಯ ಹುದ್ದೆಯ ಜವಾಬ್ದಾರಿ ವಹಿಸಲಾಗಿದೆ. ಅವರಿಗೆ ಸೇವಾ ಹಿರಿತನವಿಲ್ಲ. ಆದರೂ ಅವರನ್ನು ಪ್ರಭಾರ ಪ್ರಾಚಾರ್ಯ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಅವರ ವರ್ತನೆ ಸರಿಯಿಲ್ಲ. ಸಹಪ್ರಾಧ್ಯಾಪಕರ ಮಾಸಿಕ ವೇತನ ತಡೆಹಿಡಿಯುತ್ತಿದ್ದಾರೆ. ಸಹ ಪ್ರಾಧ್ಯಾಪಕರಿಗೆ ಅನಗತ್ಯವಾಗಿ ಶೋಕಾಸ್ ನೋಟಿಸ್ ನೀಡಿ ಬೆದರಿಸುತ್ತಾರೆ. ಇದರಿಂದ ಕಾಲೇಜಿನ ವಾತಾವರಣ ಹಾಳಾಗಿದೆ. ಹಿಂದೆ ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ 260ಕ್ಕೆ ಇಳಿದಿದೆ. ವಿದ್ಯಾರ್ಥಿಗಳು ಬೇರೆ ಕಡೆ ಕಾಲೇಜಿಗೆ ಸೇರುತ್ತಿದ್ದಾರೆ. ಈ ಬಾರಿಯ ಪರೀಕ್ಷಾ ಫಲಿತಾಂಶದ ನಂತರ ಅಂತಿಮ ವರ್ಷದ ಬಿ.ಎ ಮತ್ತು ಬಿ.ಕಾಂ ವಿದ್ಯಾರ್ಥಿಗಳು ಹೊರಹೋದ ಬಳಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ. ಇದರಿಂದ ಪಾರಾಗುವ ದಾರಿ ಹುಡುಕಬೇಕಾಗಿದೆ. ಕಾಯಂ ಪ್ರಾಚಾರ್ಯರನ್ನು ನೇಮಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಕಾಲೇಜು ಉಳಿಯುತ್ತದೆ ಎಂದು ಶಾಸಕರಿಗೆ ಮಾಹಿತಿ ನೀಡಿದರು.
ಕಾಯಂ ಪ್ರಾಚಾರ್ಯರ ಹುದ್ದೆ ಖಾಲಿಯಿದ್ದಾಗ ಹಿರಿಯ ಸಹಪ್ರಾಧ್ಯಾಪಕರೊಬ್ಬರನ್ನು ಆ ಹುದ್ದೆಗೆ ನೇಮಿಸಲಾಗುತ್ತದೆ. ಆದರೆ ಈ ಕಾಲೇಜಿನಲ್ಲಿ ಎಲ್ಲ ಸಹ ಪ್ರಾಧ್ಯಾಪಕರು ಒಂದೇ ಬ್ಯಾಚಿನವರಾಗಿದ್ದಾರೆ. ಸೇವಾ ಹಿರಿತನ ಹೊಂದಿದವರು ಯಾರೊಬ್ಬರೂ ಇಲ್ಲ. ಈಗಿನ ಪ್ರಭಾರ ಪ್ರಾಚಾರ್ಯರು ಕೂಡ ಹಿರಿಯ ಬ್ಯಾಚಿನವರಲ್ಲ. ಕೂಡಲೆ ಕಾಲೇಜಿಗೆ ಕಾಯಂ ಪ್ರಾಚಾರ್ಯರನ್ನು ನೇಮಿಸಬೇಕು. ಅಥವಾ ಬೇರೆ ಕಾಲೇಜಿನಿಂದ ಸೇವಾಹಿರಿತನ ಹೊಂದಿರುವ ಪ್ರಾಧ್ಯಾಪಕರಿಗೆ ಪ್ರಾಚಾರ್ಯ ಹುದ್ದೆಯ ಹೊಣೆ ವಹಿಸಬೇಕು ಎಂದು ಒತ್ತಾಯಿಸಿದರು.
ಸಹಪ್ರಾಧ್ಯಾಪಕರಾದ ಡಾ. ಬಿ.ಅಪೂರ್ವಾ ರಾಜ್, ಉದಯಕುಮಾರ್, ರಂಗಸ್ವಾಮಿ, ವಸಂತ ಲಕ್ಷ್ಮೀ, ದಯಾನಂದ, ಶಿವರಾಜಕುಮಾರ್, ನಿವೇದಿತಾ, ಸುನೀತಾ ಇತರರಿದ್ದರು.