ಚನ್ನರಾಯಪಟ್ಟಣ: ಹಲವಾರು ಮಹಾತ್ಮರ ತ್ಯಾಗ, ಬಲಿದಾನದ ಫಲವಾಗಿ ದೇಶವು ಸರ್ವಸ್ವತಂತ್ರವಾಗಿ, ಅಭಿವೃದ್ಧಿಯಲ್ಲಿ ದಾಪುಗಾಲಿಟ್ಟು, ಪ್ರಪಂಚದಲ್ಲೇ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಶಾಸಕ ಡಾ.ಸಿ.ಎನ್. ಬಾಲಕೃಷ್ಣ ತಿಳಿಸಿದರು.
ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಂಗಳವಾರ ಆಚರಿಸಲಾದ 77ನೇ ಸ್ವಾತಂತ್ರ್ಯ ದಿನಾಚರಣೆ ಮಹೋತ್ಸವದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ದೇಶದಲ್ಲಿ ಹುಟ್ಟಿರುವ ನಾವು ಈ ದೇಶಕ್ಕಾಗಿ ಏನನ್ನಾದರೂ ಕೊಡುಗೆ ನೀಡುವಲ್ಲಿ ಮುಂದಾಗಿ ದೇಶದ ಐಕ್ಯತೆ, ಒಗ್ಗಟ್ಟು, ಸಮಗ್ರತೆ ಕಾಪಾಡುವುದು ಪ್ರತಿ ಭಾರತೀಯನ ಕರ್ತವ್ಯವಾಗಿದೆ ಎಂದರು.
ದೇಶವು ಸ್ವಾತಂತ್ರ್ಯ ನಂತರ ಅಭಿವೃದ್ಧಿ ಸಲುವಾಗಿ ಪಂಚವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಂಡು ಅಮೂಲಾಗ್ರ ಅಭಿವೃದ್ಧಿ ಸಾಧಿಸಿದ ಕೀರ್ತಿ ಹೊಂದಿದೆ. ಕೃಷಿ, ಆರೋಗ್ಯ, ಶೈಕ್ಷಣಿಕ, ಮೂಲ ಸೌಲಭ್ಯಗಳ ಸಾಕಾರದೊಂದಿಗೆ ಚಂದ್ರಯಾನ-3 ರ ಯಶ್ವಸಿ ಉಡಾವಣೆ ಈ ದೇಶದ ಹಿರಿಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದೆ. ಪ್ರಪಂಚದಲ್ಲೇ ಅತಿ ಹೆಚ್ಚಿನ ಯುವಕರನ್ನು ಹೊಂದಿರುವ ನಮ್ಮ ದೇಶದ ಐಕ್ಯತೆ, ಸಮಾನತೆಗೆ ಧಕ್ಕೆಯುಂಟಾದಲ್ಲಿ ನಾವೆಲ್ಲ ಒಂದಾಗಿ ಹೋರಾಡುವ ಅವಶ್ಯಕತೆಯಿದೆ ಎಂದರು.
ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಸಿ.ಜಿ.ಗೀತಾ ಅವರು ಧ್ವಜ ಸಂದೇಶ ನೀಡಿ, ಈ ಸ್ವಾತಂತ್ರ್ಯ ಸಂಭ್ರಮದ ಹಿಂದೆ ಧೀಮಂತ ನಾಯಕರ ಜೀವ ಬಲಿದಾನದೊಂದಿಗೆ ಕ್ರಾಂತಿಕಾರಿಗಳ ರಕ್ತದ ಕಲೆ ಇದೆ. ಸಂಘರ್ಷಮಯ ಹೋರಾಟ ಅಂತ್ಯವಾಗಿ ಹೊಸ ಯುಗ ಆರಂಭವಾದ ಸುದಿನದ ದಿನ ಇಂದು. 7ದಶಕಗಳಲ್ಲಿ ಸಾಧಿಸಿದ ಮಹತ್ತರ ಸಾಧನೆಯಿಂದಾಗಿ ವಿಶ್ವಕ್ಕೆ ಆಗ್ರಗಣ್ಯ ದೇಶವಾಗಿ ಭಾರತ ಬೆಳೆದಿದೆ ಎಂದರು.
ಧ್ವಜಾರೋಹಣದ ನಂತರ ಅಲಂಕೃತ ಜೀಪಿನಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ತಹಶೀಲ್ದಾರ್ ಸಿ.ಜಿ.ಗೀತಾ, ಡಿವೈಎಸ್‌ಪಿ ಪಿ.ರವಿಪ್ರಸಾದ್ ಅವರು ಸೇರಿ ಪೊಲೀಸ್, ಗೃಹರಕ್ಷಕ ದಳ, ಎನ್‌ಎನ್‌ಸಿ ತಂಡ, ಸೇರಿ ಶಾಲೆಗಳ ಪಥಸಂಚಲನಕ್ಕೆ ಅಣಿಯಾಗಿದ್ದ ತಂಡಗಳಿಗೆ ಗೌರವವಂದನೆ ಸಲ್ಲಿಸಿದರು. ನಂತರ ಪಥಸಂಚಲನ ತಂಡಗಳು ಧ್ವಜವಂದನೆ ಸಲ್ಲಿಸಿದರು. ಈ ಸಂದರ್ಭ ಪತ್ರಕರ್ತ ಸಿ.ವಿ.ಲೋಹಿತ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಮೂರು ಖಾಸಗಿ ಶಾಲೆಗಳಿಂದ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಾಯಿತು.
ಸಮಾರಂಭದಲ್ಲಿ ಎಚ್.ಎಸ್.ಎಸ್.ಕೆ.ಅಧ್ಯಕ್ಷ ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಸಾಪ ತಾಲೂಕು ಅಧ್ಕಕ್ಷ ಎಚ್.ಎನ್.ಲೋಕೇಶ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಬಿಇಒ ಎಚ್.ಎನ್.ದೀಪಾ, ತಾಲೂಕು ಪಂಚಾಯಿತಿ ಸಿಇಒ ಹರೀಶ್, ಪುರಸಭೆ ಸಿಒ ಹೇಮಂತ್‌ಕುಮಾರ್, ಪುರಸಭಾ ಸದಸ್ಯರು ಇದ್ದರು.