ಜಿಲ್ಲೆ

ಪ್ರಧಾನಿಗೆ ಜನಪರ ಕಾಳಜಿ ಇಲ್ಲ: ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಅನ್ಷುಲ್ ಟೀಕೆ

ಮೈಸೂರು: ನೋಟು ಅಮಾನ್ಯೀಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರ ಸಂಕಷ್ಟದ ಬಗ್ಗೆ ಕಾಳಜಿಯೇ ಇಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ (ಬಾಬು ಜಗಜೀವನರಾಮ್ ಮೊಮ್ಮಗ) ಅನ್ಷುಲ್ ಅವಿಜಿತ್ ಟೀಕಿಸಿದರು.
ದೇಶದಲ್ಲಿ ಬಡತನ, ನಿರುದ್ಯೋಗ, ಬೆಲೆ ಏರಿಕೆಯಿಂದ ಸಾವಿರಾರು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಲವು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾಗಿಯೂ ಜನರ ಸಂಷಕ್ಟಕ್ಕೆ ನೆರವಾಗುವಂತಹ ಯೋಜನೆಗಳನ್ನು ಮೋದಿ ರೂಪಿಸಿಲ್ಲ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ನಿರುದ್ಯೋಗಿಗಳ ಭವಿಷ್ಯ ಅತಂತ್ರವಾಗಿದೆ. ಈ ಹಿಂದೆ ಕರ್ನಾಟಕ ಉದ್ಯೋಗ ನೀಡಿಕೆಗೆ ಹೆಸರುವಾಸಿಯಾಗಿತ್ತು. ಆದರೆ ಈಗ ಆ ಪರಿಸ್ಥಿತಿಯಿಲ್ಲ. ಪಿಎಸ್‌ಐ, ಉಪನ್ಯಾಸಕರ ನೇಮಕಾತಿ ಹಗರಣ ಸದ್ದು ಮಾಡಿದೆ. ಶೇ.40 ಪರ್ಸೆಂಟ್ ಸರ್ಕಾರ ಎನ್ನುವ ಕುಖ್ಯಾತಿ ಪಡೆದಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಬೆಲೆಯೇರಿಕೆಯಿಂದಾಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಅಲ್ಪಸಂಖ್ಯಾತರು ಹಾಗೂ ಇನ್ನಿತರ ಸಮುದಾಯಗಳ ನಡುವೆ ಕಂದಕ ಸೃಷ್ಟಿಸಲಾಗುತ್ತಿದೆ. ಬಿಜೆಪಿ ಜನವಿರೋಧಿ ಆಡಳಿತದಿಂದ ಜನರು ಬೇಸತ್ತಿದ್ದಾರೆ ಎಂದರು.
ಕಾಂಗ್ರೆಸ್ ಬಗ್ಗೆ ಜನರಲ್ಲಿ ಒಲವು ಬಂದಿದೆ. ಈ ಬಾರಿ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಹಣದುಬ್ಬರದಿಂದ ತತ್ತರಿಸುತ್ತಿರುವ ಜನತೆಗೆ ನೆರವಾಗಲು ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಮನೆಯೊಡತಿಗೆ ಮಾಸಿಕ ಎರಡು ಸಾವಿರ ರೂ., ನಿರುದ್ಯೋಗಿಗಳಿಗೆ ಭತ್ಯೆ, 10 ಲಕ್ಷ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದು, ಅದನ್ನು ಈಡೇರಿಸಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಇತರರು ಇದ್ದರು.