ಹುಬ್ಬಳ್ಳಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕರೆದ ಸರ್ವ ಪಕ್ಷಗಳ ಸಭೆಯಲ್ಲಿ ಭದ್ರತಾ ವೈಫಲ್ಯ ಎಂದು ರಕ್ಷಣಾ ಸಚಿವರು ತಪ್ಪನ್ನು ತಾವೇ ಒಪ್ಪಿಕೊಂಡಿದ್ದಾರೆ. ಸರ್ವ ಪಕ್ಷದ ಸಭೆ ಕರೆದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದು ಎಷ್ಟು ಸರಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಈಗಲೂ ಕಾಂಗ್ರೆಸ್ ಮೇಲೆಯೇ ಆರೋಪ ಮಾಡುತ್ತಾರೆ. ತಮ್ಮ ಸರ್ಕಾರವಿದೆ ಎಂಬುದು ಕೆಲ ಬಿಜೆಪಿ ನಾಯಕರಿಗೆ ಮರೆತು ಹೋಗಿದೆ. ಕಾಶ್ಮೀರದ ಪಹಲ್ಗಾಮ್ ಹೆಚ್ಚು ಪ್ರವಾಸಿಗರು ಬರುವ ಪ್ರದೇಶ. ಅಲ್ಲಿ ಸೇನೆ ಆಗಲಿ, ಪೊಲೀಸ್ ಆಗಲಿ ನಿಯೋಜನೆ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ.
ಇನ್ನಾದರೂ ಕೇಂದ್ರ ಗೃಹ ಸಚಿವರು ಬೇರೆ ಬೇರೆ ರಾಜ್ಯಗಳ ಸರ್ಕಾರಗಳನ್ನು ಉರುಳಿಸುವುದನ್ನು ಬಿಟ್ಟು ದೇಶದ ಭದ್ರತೆ ಕಡೆಗೆ ಗಮನ ಕೊಡಲಿ. ಬಿಜೆಪಿ ಅಧಿಕಾರಿದಲ್ಲಿಯೇ ಉರಿ ದಾಳಿ, ಪಟಾಠಕೋಟ, ಅಮರನಾಥ ಯಾತ್ರಿಗಳ ಮೇಲೆ ದಾಳಿ, ಫುಲ್ವಾಮಾ ದಾಳಿ, ಅಕ್ಷರಧಾಮ, ಸಂಸತ್ ಮೇಲೆ ದಾಳಿ ಹೀಗೆ ಅನೇಕ ದಾಳಿಗಳು ನಡೆದಿವೆ. ಪುಲ್ವಾಮಾ ದಾಳಿಯಲ್ಲಿ ಆರ್‌ಡಿಎಕ್ಸೃ್ ಹೇಗೆ ತಲುಪಿತು ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಸೇನೆ ಕಡಿತಗೊಳಿಸಿದ್ದಾರೆ ಎಂದು ನಿವೃತ್ತ ಮೇಜರ್ ಜನರಲ್ ಭಕ್ಷಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಬಿಜೆಪಿ ನಾಯಕರು, ವಿರೋಧ ಪಕ್ಷದ ನಾಯಕರುಗಳಿಗೆ ದೂರುವುದನ್ನು ಬಿಟ್ಟು ಟೀಕೆಗಳನ್ನು ಸಹಿಸಿಕೊಳ್ಳಲಿ. ಪ್ರಶ್ನೆ ಮಾಡಿದವರನ್ನು ದೇಶ ವಿರೋಧಿಗಳು ಎಂದು ಬಿಂಬಿಸುವುದು ಬೇಡ. ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವುದನ್ನು ನಿಲ್ಲಿಸಲಿ ಎಂದಿದ್ದಾರೆ.