ಜಿಲ್ಲೆ

ಪ್ರಧಾನಿ ಮೋದಿಗೆ ಹೊಟ್ಟೆಕಿಚ್ಚು

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಕಂಡು ಹೊಟ್ಟೆ ಕಿಚ್ಚಾಗುತ್ತಿದೆ. ಅದಕ್ಕೆ ಬಡ ಜನರಿಗೆ ಉತ್ತಮ ಯೋಜನೆಗಳನ್ನು ನೀಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಟೀಕಿಸುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಕುಟುಕಿದರು.


ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ 11 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಇದರಿಂದ ದೇಶ ಆರ್ಥಿಕವಾಗಿ ದಿವಾಳಿಯಾಗುವುದಿಲ್ಲ. ಆದರೆ, ಬಡ ಜನರ ದುಡ್ಡನ್ನು ಅವರಿಗಾಗಿಯೇ ಯೋಜನೆ ರೂಪಿಸಿ ಖರ್ಚು ಮಾಡಿದರೆ, ಆರ್ಥಿಕತೆ ಹಾಳಾಗುತ್ತದೆ ಎನ್ನುತ್ತಾರೆ. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 50 ಸಾವಿರ ಕೋಟಿ ರೂ. ಬೇಕು. ಐದು ವರ್ಷ ಕೊಟ್ಟರೂ 2.5ಲಕ್ಷ ಕೋಟಿ ರೂ. ಖರ್ಚಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.


ಮೋದಿ 9 ವರ್ಷದಲ್ಲಿ ಒಮ್ಮೆಯೂ ಸುದ್ದಿಗೋಷ್ಠಿ ನಡೆಸಿಲ್ಲ. ಕೆಲ ಮಾಧ್ಯಮಗಳಿಗೆ ಮೊದಲೇ ಪ್ರಶ್ನೆಗಳನ್ನು ನೀಡಿ ಅದಕ್ಕೆ ಉತ್ತರಿಸಿದ್ದಾರೆ. ಅವರಿಗೆ ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಇಲ್ಲ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ವಿಮರ್ಶೆಗೆ ಒಳಪಡಬೇಕು. ಅದಕ್ಕೆ ಅವರು ಅವಕಾಶ ನೀಡಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರೇ ಉತ್ತರಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿಯವರು ಕೆಲ ಮಾಧ್ಯಮಗಳ ಮುಂದೆ ಮಾತನಾಡಿದ್ದು ಅಚ್ಚರಿ ಮೂಡಿಸುತ್ತದೆ ಎಂದು ಲೇವಡಿ ಮಾಡಿದರು.