ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕೀಳುಪದ ಬಳಕೆ ಮಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ಧ ಶನಿವಾರ ಜಿಲ್ಲಾ ಬಿಜೆಪಿಯಿಂದ ಇಲ್ಲಿನ ಗಾಂ ವೃತ್ತದಲ್ಲಿ ಮಿಂಚಿನ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರಕಾಶಮಾನ ಮಾಡುತ್ತಿರುವ ನಮ್ಮ ಪ್ರಧಾನಿಗಳ ಬಗ್ಗೆ ದೇಶ, ವಿದೇಶಗಳ ಅಗ್ರಗಣ್ಯ ನಾಯಕರು, ಅಧ್ಯಕ್ಷರು ಪ್ರಸಂಶೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದನ್ನು ಸಹಿಸದ ಪಾಕಿಸ್ತಾನ ಕೀಳುಪದ ಬಳಕೆ ಮಾಡುವ ಮೂಲಕ ಮತ್ತೊಮ್ಮೆ ಭಾರತದ ವಿರುದ್ಧ ಕಾಲ್ಕೆದರಿ ನಿಂತಿದೆ ಎಂದು ಆರೋಪಿಸಿದರು.
ಭಯೋತ್ಪಾದಕ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತ, ಅಲ್ಲದೆ ಅಂಥ ಸಂಘಟನೆಗಳಿಗೆ ಹಣಕಾಸಿನ ನೆರವು ಕೊಡುತ್ತ ಬಂದಿರುವ ಪಾಕಿಸ್ತಾನಕ್ಕೆ ತನ್ನ ದೇಶದ ಆಥರ್ಿಕ ಸ್ಥಿತಿ ಹದಗೆಟ್ಟಿರುವ ಬಗ್ಗೆ ಅರಿವಿಲ್ಲ. ಬೇರೆ ದೇಶಗಳ ಮುಂದೆ ಹಣಕ್ಕಾಗಿ ಯಾಚನೆ ಮಾಡುವ ದಯನೀಯ ಸ್ಥಿತಿಗೆ ಬಂದು ನಿಂತಿದೆ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಸ್ವಾಭಿಮಾನದ ದೇಶವನ್ನಾಗಿ ಮಾಡುತ್ತಿದ್ದಾರೆ. ಮೋದಿ ವಿರುದ್ಧ ಆಡಿದ ಮಾತುಗಳನ್ನು ಪಾಕಿಸ್ತಾನ ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿ ಮದ್ನಾಳ್, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ವೆಂಕಟರೆಡ್ಡಿ ಅಬ್ಬೆತುಮಕೂರು, ಯುಡಾ ಅಧ್ಯಕ್ಷ ರುದ್ರಗೌಡ, ನಗರಸಭೆ ಸದಸ್ಯ ವಿಲಾಸ್ ಪಾಟೀಲ್, ಮಾರುತಿ ಕಲಾಲ್, ಸ್ವಾಮಿದೇವ ದಾಸನಕೇರಿ, ಅಂಬಯ್ಯ ಶಾಬಾದಿ, ಆನಂದ್ ಗಡ್ಡಿಮನಿ, ಸುನಿತಾ ಚವ್ಹಾಣ್, ಅಯ್ಯಣ್ಣ ಹುಂಡೇಕಾರ, ಶಿವರಾಜ ಪಾಟೀಲ್, ರಮೇಶ ದೊಡಮನಿ, ನಗರ ಮಂಡಲ ಅಧ್ಯಕ್ಷ ಮಂಜುನಾಥ್ ಜಡಿ ಇದ್ದರು.