ಜಿಲ್ಲೆ

ಪ್ರಧಾನಿ ಜನ್ಮ ದಿನಕ್ಕೆ ವಿವಿಧ ಸೇವಾ ಕಾರ್ಯ

ಶ್ರೀರಂಗಪಟ್ಟಣ: ವಿಕಸಿತ ಭಾರತ ನಿರ್ಮಾಣದ ಮೂಲಕ ದೇಶ ಹಾಗೂ ದೇಶವಾಸಿಗಳ ಸರ್ವಾಂಗೀಣ ಅಭಿವೃದ್ಧಿಗೆ ಅಹರ್ನಿಶಿ ದುಡಿದು ವಿಶ್ವನಾಯಕನೆನಿಸಿಕೊಂಡ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನಪರ, ಸಮಾಜಮುಖಿ ಕಾರ್ಯಗಳ ಮೂಲಕ ನೆನೆಯುವ ಕಾರ್ಯ ದೇಶದುದ್ದಕ್ಕೂ ನಡೆಯುತ್ತಿದೆ ಎಂದು ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಹೇಳಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮದಿನದ ಅಮೃತಮಹೋತ್ಸವ ಪ್ರಯುಕ್ತ ಬಿಜೆಪಿ ಮಂಡಲ ಹಾಗೂ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರು, ಮಹನೀಯರು ಹಾಗೂ ಶ್ರಮಿಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಚ್ಛ ಭಾರತ ಮಿಷನ್, ಬೇಟಿ ಬಚಾವೋ ಬೇಟಿ ಪಡಾವೋ, ಮೇಕ್ ಇನ್ ಇಂಡಿಯಾ, ಪಿಎಂ ಮುದ್ರಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸ್ಮಾರ್ಟ್ ಸಿಟಿ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿ ವಿಶ್ವದೆದರು ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುನ್ನೆಲೆಗೆ ತಂದು ಇಂದು 4ನೇ ಸ್ಥಾನಕ್ಕೆ ತರುವ ಮೂಲಕ ವಿಶ್ವನಾಯಕರಾಗಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಹೊಸ ನಾಂದಿ ಹಾಡಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಧೈರ್ಯ ಮತ್ತು ದಿಟ್ಟ ನಿರ್ಧಾರದಿಂದ ಭಾರತೀಯ ಸೈನ್ಯಕ್ಕೆ ಹೊಸ ಬಲತುಂಬಿ ಶತ್ರು ರಾಷ್ಟ್ರಗಳ ಉಗ್ರವಾದದ ಹುಟ್ಟಡಗಿಸಿ ನಡುಕಹುಟ್ಟಿಸಿದ್ದಾರೆ ಎಂದು ಬಣ್ಣಿಸಿದರು.

ಇಂತಹ ಮೇರು ವ್ಯಕ್ತಿತ್ವದ ನಾಯಕ ತಮ್ಮ 75ನೇ ವರ್ಷದ ಸುಸಂದರ್ಭದಲ್ಲಿ ಕ್ಷೇತ್ರದ 75 ಸ್ಥಳಗಳಲ್ಲಿ ಸಮಾಜಮುಖಿಯಾಗಿ ದುಡಿಯುವ 75 ವಿವಿಧ ಕ್ಷೇತ್ರಗಳಾದ ನಿವೃತ್ತ ಯೋಧರು, ಸೂಲಗಿತ್ತಿಯರು, ಶಿಕ್ಷಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳು, ವೈದ್ಯರು, ವಕೀಲರು, ಪ್ರಗತಿಪರ ರೈತರು, ಸಾಧಕ ರೈತಾಪಿ ಮಹಿಳೆಯರು, ಜನಪದ ಕಲಾವಿದರಂತಹ ಮಹನೀಯರನ್ನು ಸನ್ಮಾನಿಸಲಾಗುತ್ತಿದೆ. ನಮಗಾಗಿ ಶ್ರಮವಹಿಸುವ ಪೌರಕಾರ್ಮಿಕರು ಹಾಗೂ ಆಟೋಚಾಲಕರನ್ನು ಗುರುತಿಸಿ ಗೌರವಿಸುವ ಹಾಗೂ ಆರೋಗ್ಯ ಮತ್ತು ರಕ್ತದಾನ ಶಿಬಿರಗಳ ಆಯೋಜನೆ ಮೂಲಕ ಪ್ರಧಾನಿ ಮೋದಿ ಅವರ ಹಿರಿಮೆಯನ್ನು ಹೆಚ್ಚಿಸುವ ಕಾರ್ಯವನ್ನು ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರೆಲ್ಲರಿಂದ ನೆರವೇರಿಸಿ ದೇಶವಾಸಿಗಳ ಶ್ರೀರಕ್ಷೆಗೆ ದುಡಿಯುವ ರಕ್ಷಕನಿಗೆ ಚೈತನ್ಯ ಸಿಗಲಿ ಎಂದು ಶ್ರೀರಂಗನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ವಿಶ್ವ ಮಟ್ಟದಲ್ಲಿ ಭಾರತ ಮತ್ತು ಭಾರತೀಯರನ್ನು ವಿಶೇಷ ಸ್ಥಾನಮಾನದಲ್ಲಿ ನೋಡುವಂತೆ ನಡೆಸಿಕೊಟ್ಟು ವಿಶ್ವನಾಯಕನ ಸ್ಥಾನ ಅಲಂಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದೆಲ್ಲೆಡೆ ಒಂದಿಲ್ಲೊಂದು ರೀತಿಯಲ್ಲಿ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಟ್ಟಣ ಪುರಸಭೆಯ ಪೌರಕಾರ್ಮಿಕರು ಮತ್ತು ನೀರುಗಂಟಿಗಳು ಹಾಗೂ 500ಕ್ಕೂ ಹೆಚ್ಚು ಆಟೋ ಮತ್ತು ಗೂಡ್ಸ್ ಆಟೋ ಚಾಲಕರಿಗೆ ಸಿಹಿಯೊಂದಿಗೆ ಸಮವಸ್ತ್ರ ವಿತರಿಸಿ ಶುಭ ಕೋರಲಾಯಿತು.

ಬಿಜೆಪಿ ಶ್ರೀರಂಗಪಟ್ಟಣ ನಗರ ಘಟಕದ ನೂತನ ಅಧ್ಯಕ್ಷರನ್ನಾಗಿ ಪಟ್ಟಣದ ಜಿ.ಇ.ಸುಧಾಕರ್ ಅವರನ್ನು ಮಂಡಲ ಅಧ್ಯಕ್ಷ ಪೀಹಳ್ಳಿ ನೇಮಕಗೊಳಿಸಿ ನೇಮಕಾತಿ ಪತ್ರ ವಿತರಿಸಲಾಯಿತು. ಪುರಸಭಾ ಸದಸ್ಯರಾದ ಗಂಜಾಂ ಕೃಷ್ಣಪ್ಪ, ಗಂಜಾಂ ಶಿವು, ಎಸ್.ಪ್ರಕಾಶ್, ಎಸ್.ಟಿ.ರಾಜು, ಲಿಂಗರಾಜು, ಶ್ರೀನಿವಾಸ್, ಚೈತ್ರಾ, ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಬಿಜೆಪಿ ಮುಖಂಡರಾದ ಮದನ್ ಮಾದೇಶ್, ದರ್ಶನ್ ಲಿಂಗರಾಜು, ಪೈ.ಮಹದೇವು, ಪುಟ್ಟರಾಜು, ಪುಟ್ಟರಾಮು, ಉಮೇಶ್ ಕುಮಾರ್, ಕಂಠಿ ರಘು, ಪ್ರಭಾಕರ್ ಗುಪ್ತಾ, ಕಿರಣ್ ಸಿಂಗ್, ಹೇಮಂತ್ ಕುಮಾರ್, ವಿಶ್ವನಾಥ್, ಪಾಲಹಳ್ಳಿ ಶಂಕರೇಗೌಡ, ನಾಗರಾಜು, ಮಹಿಳಾ ಮೋರ್ಚಾ ಸದಸ್ಯರಾದ ಮಾನಸಾ, ಮಂಜುಳಾ, ಗೀತಾ, ಛಾಯಾದೇವಿ ಉಪಸ್ಥಿತರಿದ್ದರು.