ಜಿಲ್ಲೆ

ಪ್ರಧಾನಮಂತ್ರಿ ಜನೌಷಧ ಕೇಂದ್ರ ಸ್ಥಗಿತ

ಕುಂದಗೋಳ: ಕರೊನಾದಿಂದಾಗಿ ಕೆಲಸವಿಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಪಟ್ಟಣದ ಪ್ರಧಾನಮಂತ್ರಿ ಜನೌಷಧ ಕೇಂದ್ರ ಬಾಗಿಲು ಮುಚ್ಚಿದ್ದರಿಂದಾಗಿ ಬಡ ರೋಗಿಗಳು ಪರದಾಡು ವಂತಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಲ್ಲಿ ಒಂದಾದ ಜನೌಷಧ ಕೇಂದ್ರವು ಬಡ ರೋಗಿಗಳಿಗೆ ಕಲ್ಪವೃಕ್ಷವಾಗಿತ್ತು. ಮಾರುಕಟ್ಟೆಯಲ್ಲಿರುವ ಔಷಧ ಅಂಗಡಿಯಲ್ಲಿ ಹೆಚ್ಚು ಹಣ ಕೊಟ್ಟು ಔಷಧಗಳನ್ನು ಖರೀದಿ ಮಾಡಲಾಗದೆ ಬಹುತೇಕರು ಈ ಜನೌಷಧ ಕೇಂದ್ರವನ್ನೇ ಅವಲಂಬಿಸಿದ್ದರು. ಆದರೆ, ಕೆಲವು ದಿನಗಳಿಂದ ಈ ಕೇಂದ್ರವು ಸ್ಥಗಿತಗೊಂಡಿದೆ.

ತಾಲೂಕಿನ ಬಹುತೇಕ ಜನರು ನಿತ್ಯವೂ ಈ ಕೇಂದ್ರದ ಮುಂದೆ ಕಾದು ಕುಳಿತಿರುತ್ತಾರೆ. ಆದರೆ, ಜನೌಷಧ ಕೇಂದ್ರ ಮಾತ್ರ ತೆರೆದಿರುವುದಿಲ್ಲ. ವಿಧಿಯಿಲ್ಲದೆ ಮಾರುಕಟ್ಟೆಯಲ್ಲಿರುವ ಔಷಧ ಅಂಗಡಿಗೆ ಹೋಗಿ ಹೆಚ್ಚು ಹಣ ಕೊಟ್ಟು ಔಷಧ ಖರೀದಿಸುವಂತಾಗಿದೆ ಎಂದು ಔಷಧ ಖರೀದಿಗೆ ಬಂದಿದ್ದ ರೋಗಿ ಶಿವಕ್ಕ ಛಬ್ಬಿ ಬೇಸರ ವ್ಯಕ್ತಪಡಿಸಿದರು. ಬಡ ರೋಗಿಗಳಿಗೆ ಈ ಜನೌಷಧ ಕೇಂದ್ರವು ಉಪಯುಕ್ತವಾಗಿದೆ. ಈಗಲಾದರೂ ಶಾಸಕರು, ಸಂಸದರು, ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕೇಂದ್ರವನ್ನು ತೆರೆಸಬೇಕಿದೆ.

ಜನೌಷಧ ಕೇಂದ್ರದ ಸಿಬ್ಬಂದಿ ರಾಜೀನಾಮೆ ನೀಡಿದ್ದರಿಂದ ಸ್ಥಗಿತವಾಗಿದೆ. ಕೇಂದ್ರದ ನಿರ್ವಹಣೆಯನ್ನು ಎಂಎಸ್​ಐಎಲ್​ನವರು ನಿರ್ವಹಿಸುತ್ತಿದ್ದು, ಅವರಿಗೆ ಈಗಾಗಲೆ ಈ ಕುರಿತು ಮಾತನಾಡಿದ್ದೇನೆ. ಸಿಬ್ಬಂದಿ ನೇಮಿಸುತ್ತೇವೆ ಎಂದು ಹೇಳಿದ್ದಾರೆ.| ಡಾ. ಭಾಗೀರಥಿ ವೈದ್ಯಾಧಿಕಾರಿ